ಕಲಬುರಗಿ | ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ : ಆರೋಪಿಯ ಬಂಧನ

ಭಾಗ್ಯಶ್ರೀ ಚನ್ನವೀರ
ಕಲಬುರಗಿ : ನಾಪತ್ತೆಯಾಗಿದ್ದ ಯುವತಿಯೊರ್ವಳ ಮೃತದೇಹವು 11 ದಿನಗಳ ಬಳಿಕ ಪತ್ತೆಯಾಗಿದ್ದು, ತನಿಖೆಯ ನಂತರ ಕೊಲೆಯೆಂದು ತಿಳಿದು ಬಂದಿದೆ. ಘಟನೆಯು ಸೇಡಂ ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆಯ ವ್ಯಾಪ್ತಿಯ ಅಲ್ಟ್ರಾಟೆಕ್ (ರಾಜಶ್ರೀ) ಸಿಮೆಂಟ್ ಕಾರ್ಖಾನೆಯ ಸೋಲಾರ ಗಾರ್ಡನ ಬಳಿಯ ಕಾಲುವೆಯಲ್ಲಿ ನಡೆದಿದೆ.
ಮಳಖೇಡದ ನಿವಾಸಿ ಭಾಗ್ಯಶ್ರೀ ಚನ್ನವೀರ ಸೂಲಹಳ್ಳಿ(20) ಮೃತ ಯುವತಿ ಎಂದು ತಿಳಿದುಬಂದಿದ್ದು, ಅದೇ ಗ್ರಾಮದ ಮಂಜುನಾಥ್ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಸದ್ಯ ಆತನನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರನ ಆತ್ಮಹತ್ಯೆಗೆ ಸೇಡು:
ಆರೋಪಿ ಮಂಜುನಾಥ್ನ ಸಹೋದರ ವಿನೋದ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಶಾಶ್ವತ ಉದ್ಯೋಗ ಸಿಗದೇ ಆತ ಕಳೆದ ಆಗಸ್ಟ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಕಾರಣ, ಮೃತೆಯ ತಂದೆ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡ ಚನ್ನವೀರನೆಂದು ಮಂಜುನಾಥ್ ಶಂಕಿಸಿದ್ದ. ಈ ಸೇಡಿನಿಂದಲೇ ಅವನು ಚನ್ನವೀರನ ಪುತ್ರಿ ಭಾಗ್ಯಶ್ರೀಯನ್ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 11 ರಂದು ಯುವತಿ ನಾಪತ್ತೆಯಾಗಿದ್ದು, ಕುಟುಂಬವು 12ರಂದು ದೂರು ದಾಖಲಿಸಿತ್ತು. ಬಳಿಕ ಕಾರ್ಖಾನೆಯ ಕಾಲುವೆಯ ಬಳಿಯಲ್ಲಿ ಪತ್ತೆಯಾದ ಮೃತದೇಹವು ಭಾಗ್ಯಶ್ರೀಯದ್ದೇ ಎಂದು ದೃಢಪಟ್ಟಿದೆ.
ಪೊಲೀಸರು ಮಂಜುನಾಥ್ ನನ್ನು ಬಂಧಿಸಿದ್ದು, ಈತನಿಗೆ ಇನ್ನೂ ಮೂವರು ಸಹಕಾರ ನೀಡಿದ್ದಾರೆಂಬ ಸುಳಿವು ಸಿಕ್ಕಿದೆ. ಶೀಘ್ರವೇ ಅವರನ್ನು ವಶಕ್ಕೆ ಪಡೆಯಲಾಗುವುದಾಗಿ ಮಳಖೇಡ ಠಾಣೆ ಪೊಲೀಸರು ತಿಳಿಸಿದ್ದಾರೆ.







