ಕಲಬುರಗಿ | ನರೇಗಾ ಕೂಲಿ ವಿಳಂಬಕ್ಕೆ ಕೇಂದ್ರದ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಕಿಡಿ

ಕಲಬುರಗಿ : ಕಳೆದ ಮೂರು ತಿಂಗಳಿಂದ ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಕೂಲಿ ಪಾವತಿಸದಿರುವುದು ದುರದೃಷ್ಟಕರ ಎಂದು ಹಿರಿಯ ಶಾಸಕರೂ ಆಗಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಆಳಂದ ತಾಲೂಕಿನ ದಣ್ಣೂರ ಗ್ರಾಮ ಪಂಚಾಯತತ್ ಆಶ್ರಯದಲ್ಲಿ ಗುರುವಾರ ವಿಶ್ವಕಾರ್ಮಿಕರ ದಿನಾಚರಣೆ ಪ್ರಯುಕ್ತ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಜಾಬ್ ಕಾರ್ಡ್ ವಿತರಣೆ, ಹೊಸ ತೆರೆದ ಬಾವಿಗಳ ಕಾಮಗಾರಿ ಆದೇಶ ಪತ್ರ ವಿತಣೆ ಹಾಗೂ ವಿಮಾ ಪಾಲಿಸಿ ಕೈಗೊಳ್ಳುವ ಕಾರ್ಯಕ್ರಮವು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಕಾರ್ಮಿಕರು ಮತ್ತು ಮಹಿಳೆಯರು ಸಾರಾಯಿ ನಿಷೇಧಿಸುವಂತೆ ಒತ್ತಾಯಿಸಿದಾಗ, ಶಾಸಕರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಈ ತೀರ್ಮಾನವನ್ನು ಅಂಗೀಕರಿಸಿ, ತಾಲೂಕು ಆಡಳಿತಕ್ಕೆ ಸಲ್ಲಿಸುವಂತೆ ಸೂಚಿಸಿದರು. ಸಾರಾಯಿ ನಿಷೇಧ ಜಾರಿಯಾಗದಿದ್ದರೆ, ಬೀದಿ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ಘೋಷಿಸಿದರು, "ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ" ಎಂದು ದೃಢವಾಗಿ ಹೇಳಿದರು.
ಈ ವೇಳೆ ಹೊಸದಾಗಿ ನೋಂದಾಯಿತ ಕಾರ್ಮಿಕರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು. ಗ್ರಾಮ ಆರೋಗ್ಯ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ತಾಪಂ ಇಓ ಮಾನಪ್ಪ ಕಟ್ಟಿಮನಿ ಪ್ರಸ್ತಾವಿಕ ಮಾತನಾಡಿ, ನರೇಗಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ತಾಲೂಕಿನ ಗ್ರಾಪಂಗಳಲ್ಲಿ ಕೈಗೊಳ್ಳಲಿರುವ ತೆರೆದ ಬಾವಿ ಇನ್ನಿತರ ಕಾಮಗಾರಿಗಳ ಮಾಹಿತಿ ಒದಗಿಸಿ ಲಾಭ ಪಡೆಯುವಂತೆ ಹೇಳಿದರು.
ವೇದಿಕೆಯಲ್ಲಿ ವಿಎಸ್ಎಸ್ಎಸ್ ಅಧ್ಯಕ್ಷ ಭೀಮಾಶಂಕರ ಪಾಟೀಲ, ಗ್ರಾಪಂ ಅಧ್ಯಕ್ಷೆ ಹಸೀನಾಬಿ ಎಂ.ಕೋರಳ್ಳಿ, ಉಪಾಧ್ಯಕ್ಷೆ ಮೀನಾಕ್ಷಿ ಬಿ.ಹರಳಯ್ಯಾ, ಜಿಪಂ ಕಾರ್ಯದರ್ಶಿ ವೀರೇಂದ್ರ, ಮುಖಂಡ ಚನುಗೌಡ, ಯುವ ಮುಖಂಡ ಗುರು ಬಿ.ಪಾಟೀಲ, ನರೇಗಾ ಎಡಿ ಸೋಮಶೇಖರ, ಪಿಡಿಒ ಪ್ರವೀಣಕುಮಾರ ಉಡಗಿ, ಕಾರ್ಯದರ್ಶಿ ಶರಣಬಸಪ್ಪ ಹುಡಗಿ, ಐಇಸಿ ಸಂಜುಕುಮಾರ ಸಂಗೋಳಗಿ, ಸಿಎಇ ಚಿದಾನಂದ ಸ್ವಾಮಿ, ಟಿಎಫ್ಡಿ ಸಿದ್ಧರಾಮ ಕಾರೆ ಗ್ರಾಪಂ ಸದಸ್ಯರು ಸೇರಿದಂತೆ ಮಹಿಳಾ, ಪುರುಷ ಕಾರ್ಮಿಕರು ಉಪಸ್ಥಿತರಿದ್ದರು.







