ಕಲಬುರಗಿ | ಅಂಬಿಗರ ಚೌಡಯ್ಯ ಮೂರ್ತಿ ವಿರೂಪ ಘಟನೆ ಖಂಡಿಸದ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ್ ಗರಂ

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ವಿರೂಪಗೊಳಿಸಿದ ಘಟನೆಯನ್ನು ಖಂಡಿಸದ ಜಿಲ್ಲೆಯ ಶಾಸಕ, ಪರಿಷತ್ ಸದಸ್ಯರ ವಿರುದ್ಧ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಗರಂ ಆಗಿದ್ದಾರೆ.
ಮುತ್ತಾಗಾ ಗ್ರಾಮಕ್ಕೆ ಭೇಟಿ ನೀಡಿ, ಮೂರ್ತಿ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರ್, ನಮ್ಮ ಸಮಾಜದಿಂದ ನಾನೊಬ್ಬನೇ ಮತಗಳನ್ನು ಪಡೆದಿಲ್ಲ, ಜಿಲ್ಲೆಯ ಹಲವು ಶಾಸಕರು ನಮ್ಮ ಸಮುದಾಯದ ವೋಟ್ ಗಳನ್ನು ಪಡೆದಿದ್ದಾರೆ. ಅವರ್ಯಾರು ಕೂಡ ಅಂಬಿಗರ ಚೌಡಯ್ಯನವರ ಮೂರ್ತಿಯ ವಿರೂಪ ಮಾಡಿರುವ ಬಗ್ಗೆ ಮಾತನಾಡಿಲ್ಲ. ಪಕ್ಷಾತೀತವಾಗಿ ಖಂಡಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಒಂದು ಮಾತೂ ಕೂಡ ಆಡದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮೂರ್ತಿ ವಿರೂಪಗೊಳಿಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಅವರನ್ನು ಗಡಿಪಾರು ಮಾಡಬೇಕು, ಇದ್ದ ಸ್ಥಳದಲ್ಲೇ ಮತ್ತೆ ಮೂರ್ತಿ ಎದ್ದು ನಿಲ್ಲಬೇಕು, ನಾನೂ ಕೂಡ ಮೂರ್ತಿ ನಿರ್ಮಾಣಕ್ಕೆ ಕೈಲಾದಷ್ಟು ಹಣ ಸಹಾಯ ಮಾಡುವುದಾಗಿ ತಿಳಿಸಿದ ತಿಪ್ಪಣ್ಣಪ್ಪ ಕಮಕನೂರ್, ಒಂದು ವೇಳೆ ಶೀಘ್ರದಲ್ಲಿ ನಮಗೆ ನ್ಯಾಯ ಸಿಗದೇ ಹೋದರೆ ವಿಧಾನ ಸೌಧದ ಎದುರು ಪ್ರತಿಭಟನೆ ಮಾಡುತ್ತೇನೆ. ಅಲ್ಲಿಯೂ ಏನೂ ಆಗದಿದ್ದರೆ ಲಕ್ಷಾಂತರ ಜನರನ್ನು ಸೇರಿಸಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.





