ಕಲಬುರಗಿ| ಬಹುಭಾಷಾ ನಾಟಕೋತ್ಸವ ಸಮಾರೋಪ ಸಮಾರಂಭ

ಕಲಬುರಗಿ: ರಂಗಾಯಣ ಕಲಬುರಗಿ ವತಿಯಿಂದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಬಹುಭಾಷಾ ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾನಿಕಾಯದ ಡೀನ್ ಆಗಿರುವ ನಾಟಕ ರಚನಾಕಾರ ಡಾ.ವಿಕ್ರಮ ವಿಸಾಜಿ, ರಂಗಭೂಮಿಯು ಬಹುಸಂಸ್ಕೃತಿಗಳ ತವರು. ಇಲ್ಲಿ ಸಮಾಜದ ಹಲವು ತಿಳಿವಳಿಕೆಗಳು, ಜೀವನದ ಅನೇಕ ತತ್ವಗಳು, ಭಾಷೆಯ ವಿವಿಧ ಕ್ರಮಗಳು ಬೆರೆತು ಹೋಗಿರುತ್ತವೆ. ಇದರಿಂದ ಜೀವನವನ್ನು ಅರಿಯುವ ಹೊಸ ದಾರಿಗಳು ತೆರೆದುಕೊಳ್ಳುತ್ತವೆ ಎಂದು ಹೇಳಿದರು.
ಈ ಭಾಗದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಉರ್ದು ರಂಗಭೂಮಿ ಮತ್ತು ಮರಾಠಿ ರಂಗಭೂಮಿ ಒಟ್ಟಿಗೆ ಬೆಳೆದಿವೆ. ಪರಸ್ಪರ ಕಲಿತಿವೆ. ರಂಗಭೂಮಿಯ ಈ ಸೌಹಾರ್ದ ಸಂಸ್ಕೃತಿಯನ್ನು ಪೋಷಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ಭಾಷಾ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡವು ತೆಲಗು, ತುಳು, ತಮಿಳು ಇತ್ಯಾದಿ ಸಹೋದರಿ ಭಾಷೆಗಳಲ್ಲದೆ ಉರ್ದುವಿನಂಥ ಭಾಷೆಯೊಂದಿಗೂ ಸಾಮರಸ್ಯ ಸಾಧಿಸಿದೆ ಎಂದರು.
ಪತ್ರಾಗಾರ ಕಚೇರಿಯ ಉಪನಿರ್ದೇಶಕರಾದ ಡಾ.ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ಕನ್ನಡ ರಂಗಭೂಮಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಅದು ಈ ಶತಮಾನಗಳ ಉದ್ದಕ್ಕೂ ಧರ್ಮಾತೀತವಾಗಿಯೇ ಉಳಿದು ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಂಗಾಯಣದ ನಿರ್ದೇಶಕ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಭಾಷೆಯ ಮಿತಿಗಳನ್ನು ಮೀರಿ ಕನ್ನಡದ ನೆಲ ಎಲ್ಲವನ್ನು ಹೀರಿಕೊಂಡು ಬೆಳೆದಿದೆ. ಇನ್ನೊಂದನ್ನು ಸ್ವೀಕರಿಸುತ್ತಾ ನಮ್ಮದನ್ನು ಉಳಿಸಿಕೊಳ್ಳುತ್ತಾ ಬಹುತ್ವದ ದಾರಿಯಲ್ಲಿ ಸಾಗುವುದೇ ನಮಗೆ ಇರುವ ಅತ್ಯುತ್ತಮ ದಾರಿ. ಇಂತಹ ಬಹುತ್ವದ ಸಂಸ್ಕೃತಿಯನ್ನು ಬೆಳೆಸಲು ಹಲವು ಸೋದರ ಭಾಷೆಗಳ ಜೊತೆಗೆ ಸೇರಿ ಹಮ್ಮಿಕೊಂಡಿರುವ ಉತ್ಸವವೇ ಬಹುಭಾಷಾ ನಾಟಕೋತ್ಸವವಾಗಿದೆ ಎಂದು ಹೇಳಿದರು.







