ಕಲಬುರಗಿ| ಬಾಬರಿ ಮಸೀದಿ ಧ್ವಂಸದ ವೀಡಿಯೊ ಹಂಚಿಕೊಂಡ ಪಾಲಿಕೆ ವ್ಯವಸ್ಥಾಪಕ: ಕ್ರಮಕ್ಕೆ ಆಗ್ರಹ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯ ವ್ಯವಸ್ಥಾಪಕ ಅಂಬಾದಾಸ್ ಖತಾಲ್ ಅವರು ಬಾಬರಿ ಮಸೀದಿ ಧ್ವಂಸ ಮಾಡುತ್ತಿರುವ ಪ್ರಚೋದನಕಾರಿ ಸ್ಟೇಟಸ್ ಹಂಚಿಕೊಂಡಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಮಾಡಿರುವ ದೃಶ್ಯವಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ "ಬನಾಯೆಂಗೆ ಮಂದಿರ" ಎಂಬ ಹಾಡು ಇರುವುದು ಕೇಳಿಸುತ್ತಿದೆ. ಅದರಲ್ಲಿ ಹಿಂದೂ ಶೌರ್ಯ ದಿನ 1992ರ ಡಿಸೆಂಬರ್ 6 ಎಂದು ಬರೆಯಲಾಗಿದೆ. ಹೇಳಿದಂತೆ ಅಲ್ಲೇ ಮಂದಿರ ಮಾಡಿದ್ದೇವೆ ಎಂದು ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿರುವುದು ಕಂಡು ಬಂದಿದೆ.
ಈ ಕುರಿತ ವೀಡಿಯೊ ವೈರಲ್ ಬೆನ್ನಲ್ಲೆ ಅಲ್ಪಸಂಖ್ಯಾತ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಪ್ರಚೋದನೆ ನೀಡಿದ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಕೆಲ ಪಾಲಿಕೆ ಸದಸ್ಯರು, ಪಾಲಿಕೆಯ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ್ ಶಿಂಧೆ, ಪಾಲಿಕೆಯ ಅಧಿಕಾರಿ ಅಂಬಾದಾಸ್ ಅವರು ವಾಟ್ಸಾಪ್ ನಲ್ಲಿ ಪ್ರಚೋದನಕಾರಿ ಸ್ಟೇಟಸ್ ಹಾಕಿರುವ ಬಗ್ಗೆ ನನಗೆ ಮಾಹಿತಿ ದೊರೆತಿದೆ. ಈ ಬಗ್ಗೆ ವಿವರಣೆ ಕೇಳಿ ಅಧಿಕಾರಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.







