ಕಲಬುರಗಿ | ಕೊಲೆ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧನ

ಕಲಬುರಗಿ: ನಗರದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಫೈನಾನ್ಸಿಯರ್, ವಕೀಲ ಅನಿಲ್ ರಾಠೋಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಶನಿವಾರ ರಾತ್ರಿ ಆರೋಪಿಯನ್ನು ಬಂಧಿಸುವ ವೇಳೆ ಫೈರಿಂಗ್ ನಡೆದಿರುವುದಾಗಿ ವರದಿಯಾಗಿದೆ.
ಕೊಲೆ ಆರೋಪಿ ಈಶ್ವರ ರಾಠೋಡ್ ಎಂಬಾತ ನಗರದ ಹೊರವಲಯದ ಕೆಸರಟಗಿಯಲ್ಲಿ ಅಡಗಿ ಕುಳಿತಿರುವ ಮಾಹಿತಿ ಪಡೆದಿರುವ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಈಶ್ವರ ರಾಠೋಡ್ ಪೊಲೀಸ್ ಸಿಬ್ಬಂದಿಯಾದ ಶಿವಲಿಂಗ, ಅನಿಲ್, ಸಂಗಣ್ಣ ಅವರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಇದೇ ಸಂದರ್ಭದಲ್ಲಿ ಪಿಐ ಗುರುಗೌಡ ಪಾಟೀಲ್ ಆತ್ಮರಕ್ಷಣೆಗಾಗಿ ಆರೋಪಿ ಈಶ್ವರ ಎಡಗಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಈಶ್ವರ ರಾಠೋಡನನ್ನು ತಕ್ಷಣವೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ನಂತರ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ಸ್ಥಿತಿ ಪರಿಶೀಲಿಸಿದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ನಿವಾಸಿಗಳಾದ ಹಡ್ಡಿ ಇಮ್ರಾನ್, ಮಿನಾಹಝ್, ಅಭಿಷೇಕ್ ಎಂಬಾತರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.







