Kalaburagi | ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ

ಸಾಂದರ್ಭಿಕ ಚಿತ್ರ
ಕಲಬುರಗಿ: ಅನೈತಿಕ ಸಂಬಂಧದ ಶಂಕೆ ಹಾಗೂ ಮನೆ ನಿರ್ಮಾಣದ ವಿಚಾರದಲ್ಲಿ ಉಂಟಾಗಿದ್ದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಕಲಬುರಗಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ.
ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದ ನಾಗಯ್ಯ ಶಿವಲಿಂಗಯ್ಯ ಸ್ವಾಮಿ (40) ಶಿಕ್ಷೆಗೆ ಗುರಿಯಾದ ಆರೋಪಿ.
ಪ್ರಕರಣದ ವಿವರದಂತೆ, ನಾಗಯ್ಯನ ಪತ್ನಿ ಕಲಾವತಿ ಅವರೊಂದಿಗೆ ಅದೇ ಗ್ರಾಮದ ಈರಣ್ಣ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಶಂಕೆ ಹಾಗೂ ಮನೆ ಕಟ್ಟುವ ವೇಳೆ ಪಾಯದ ವಿಚಾರವಾಗಿ ಉಂಟಾಗಿದ್ದ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
2024ರ ಏಪ್ರಿಲ್ 17ರಂದು ಬೆಳಿಗ್ಗೆ ಈರಣ್ಣ ಅವರು ಗ್ರಾಮದ ಗುಂಡದಾರಿ ಹಳ್ಳದ ಹ್ಯಾಂಡ್ ಪಂಪ್ಗೆ ನೀರು ತರಲು ತೆರಳಿದ್ದ ವೇಳೆ ಆರೋಪಿ ಅವರನ್ನು ಹಿಂಬಾಲಿಸಿ, ಕಾಲು ಹಿಡಿದು ಕೆಳಗೆ ಬೀಳಿಸಿ, ಅಲ್ಲಿಯೇ ಇದ್ದ ಶಹಾಬಾದ್ ಕಲ್ಲಿನಿಂದ ತಲೆಗೆ ಎರಡು ಬಾರಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆ ಸಂಬಂಧ ಮೃತ ಈರಣ್ಣ ಅವರ ತಾಯಿ ಗೋದುಬಾಯಿ ಅವರು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳಾದ ಬಾಲಚಂದ್ರ ಲಕ್ಕಂ ಹಾಗೂ ಮಲ್ಲಿಕಾರ್ಜುನ ಇಕ್ಕಳಗಿ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ವಿ. ಶ್ರೀನಾಥ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಐಪಿಸಿ ಕಲಂ 302ರಡಿ ಆರೋಪಿ ನಾಗಯ್ಯನಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಜತೆಗೆ, ಮೃತನ ತಾಯಿ ಹಾಗೂ ಪತ್ನಿಗೆ ಪರಿಹಾರ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದರು.






