Kalaburagi | ಸಂಗೀತಕ್ಕೆ ಜಾತಿ-ಧರ್ಮದ ಗಡಿಗಳಿಲ್ಲ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ: ಸಂಗೀತಕ್ಕೆ ಭಾಷೆ, ಜಾತಿ ಹಾಗೂ ಧರ್ಮದ ಯಾವುದೇ ಗಡಿಗಳಿಲ್ಲ. ಅದು ಜನರ ಭಾವನೆಗಳನ್ನು ಒಂದೆಡೆ ಸೇರಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಗೀತೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ವೃದ್ಧಿಸುವ ಸಾಮರ್ಥ್ಯ ಹೊಂದಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯಪಟ್ಟರು.
ನಗರದ ಕಲಾ ಮಂಡಳದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀದೇವಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಛಾಯಾಚಿತ್ರ ಕಲಾ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ‘ಜಾನಪದ ಮತ್ತು ಸಾಂಸ್ಕೃತಿಕ ಕಲರವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರ ಸೃಜನಶೀಲತೆಗೆ ನಿರಂತರ ಪ್ರೋತ್ಸಾಹ ನೀಡುವ ಅಗತ್ಯವಿದೆ. ಅನೇಕ ಕಲಾವಿದರು ಆರ್ಥಿಕ ಸಂಕಷ್ಟಗಳ ನಡುವೆಯೂ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇಂತಹ ಕಲಾವಿದರಿಗೆ ಸಮಾಜ ಮತ್ತು ಸರ್ಕಾರದಿಂದ ಹೆಚ್ಚಿನ ಬೆಂಬಲ ದೊರೆಯಬೇಕು ಎಂದು ಅವರು ಹೇಳಿದರು.
ಹಿರಿಯ ಸಾಹಿತಿ ಡಾ. ಹನುಮಂತರಾವ ದೊಡ್ಡಮನಿ ಮಾತನಾಡಿ, ಜಾನಪದ ಸಾಹಿತ್ಯವು ಕೇವಲ ಜನಪದ ಕಥೆಗಳ ಸಂಗ್ರಹವಲ್ಲ; ಅದು ಕನ್ನಡ ಭಾಷೆ ಮತ್ತು ಶಿಷ್ಟ ಸಾಹಿತ್ಯದ ತಾಯಿಬೇರಾಗಿದೆ ಎಂದು ಹೇಳಿದರು.
“ಬಾಯಿಂದ ಬಾಯಿಗೆ ಹರಿದು ಬಂದಿರುವ ಜಾನಪದ ಪರಂಪರೆ ಕನ್ನಡ ಸಂಸ್ಕೃತಿಯ ಜೀವನಾಡಿಯಾಗಿದ್ದು, ಜನರ ಬದುಕು, ನಂಬಿಕೆ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ ಮಾತನಾಡಿ, ಕಲಾವಿದರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ದೇವೇಂದ್ರಪ್ಪ ಕಪನೂರ, ಹೋರಾಟಗಾರ ದತ್ತು ಭಾಸಗಿ ಹಾಗೂ ಮಲ್ಲಿಕಾರ್ಜುನ ಅವರು ಸಹ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶರಣಪ್ಪ ಶಿಂಪಿ ವಹಿಸಿದ್ದರು.
ಕಲರವ ಮೂಡಿಸಿದ ಕಲಾ ಪ್ರದರ್ಶನಗಳು :
ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರೇಕ್ಷಕರ ಮನಸೂರೆಗೊಂಡವು. ಶಿವಕುಮಾರ ಡಬರಾಬಾದ್ ತಂಡದ ವಿರಗಾಸೆ ಪ್ರದರ್ಶನ, ಚಂದ್ರಕಾಂತ ಡಿಗ್ಗಿ ತಂಡದ ಶಹನಾಯಿ ವಾದನ, ಬಸವರಾಜ ಶ್ರೀಂಗೆರಿ ತಂಡದ ಜಾನಪದ ಗಾಯನ, ಸಿದ್ಧಲಿಂಗ ಮಾವೂರ ತಂಡದ ಸುಗಮ ಸಂಗೀತ, ಮಹಾಂತಪ್ಪ ಕಾಂಬಳೆ ತಂಡದ ತತ್ವಪದ ಗಾಯನ ಹಾಗೂ ಮಲ್ಲಪ್ಪ ಎಸ್. ದೊಡ್ಡಿ ಅವರ ಹಂತಿಪದ ಗಾಯನ ವಿಶೇಷ ಮೆಚ್ಚುಗೆ ಪಡೆದವು.
ಇದೇ ವೇಳೆ ಸಾನ್ವಿ ಯನಗುಂಟಿ ಅವರ ಜಾನಪದ ನೃತ್ಯ ಹಾಗೂ ಅಕ್ಷತಾ ನಂದೂರ ಅವರ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ತಬಲಾದಲ್ಲಿ ಲಕ್ಷ್ಮಣ ಹೇರೂರ ಹಾಗೂ ಹಾರ್ಮೋನಿಯಂನಲ್ಲಿ ಶ್ರೀಧರ ಹೊಸಮನಿ ಸಂಗೀತ ಸಹಕಾರ ನೀಡಿದರು.






