Kalaburagi | ಗಾನ ಕೋಗಿಲೆ ಎಸ್.ಜಾನಕಿಗೆ ಕಸಾಪದಿಂದ ಸ್ವರ ನಮನ

ಕಲಬುರಗಿ : ಗಾನ ಕೋಗಿಲೆ ದಿವಂಗತ ಡಾ. ಎಸ್. ಜಾನಕಿ ಅವರು ಸುಮಾರು ಆರು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸುಮಧುರ ಗೀತೆಗಳನ್ನು ನೀಡುವ ಮೂಲಕ ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಎಸ್. ಜಾನಕಿ ಅವರಿಗೆ ಸ್ವರ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಅನೇಕ ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ ಅವರ ಸಾಧನೆ ಮತ್ತು ಸುಮಧುರ ಗಾಯನ ಸದಾಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದರು.
ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ತಮ್ಮ ಅಪರೂಪದ ಕಂಠಸಿರಿಯಿಂದ ಕೋಟ್ಯಾಂತರ ಸಂಗೀತಪ್ರಿಯರ ಮನ ಗೆದ್ದ ಎಸ್. ಜಾನಕಿ ಅವರು ಭಾರತೀಯ ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದ್ದು, ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದ ಮಹೇಶ ಚಿಂತನಪಳ್ಳಿ ಅವರು ಎಸ್. ಜಾನಕಿ ಹಾಡಿರುವ ಜನಪ್ರಿಯ ಗೀತೆಗಳನ್ನು ಗಾಯನ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಆಗಸ್ಟ್‌ನಲ್ಲಿ ಸಂಗೀತ ಕಲಾವಿದರ ಸಮ್ಮೇಳನ
ಗಾನ ಕೋಗಿಲೆ ಎಸ್. ಜಾನಕಿ ಅವರ ಸವಿ ನೆನಪಿಗಾಗಿ ಜಿಲ್ಲೆಯ ಸಂಗೀತ ಕಲಾವಿದರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಆಗಸ್ಟ್ ತಿಂಗಳಲ್ಲಿ ಒಂದು ದಿನದ ಸಂಗೀತ ಕಲಾವಿದರ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ,ಶರಣರಾಜ ಛಪ್ಪರಬಂದಿ, ಪರಮಾನಂದ ಸರಸಂಬಿ, ಗಣೇಶ ಚಿನ್ನಾಕರ, ಚಂದ್ರಕಾoತ ತಳವಾರ, ಮುರಳಿಧರ ಟೊಣಪೆ, ಪ್ರಮುಖರಾದ ಪ್ರಕಾಶ ನರೋಣಾ, ಜಯಶ್ರಿ ಜಮಾದಾರ, ರಾಜೇಂದ್ರ ಮಾಡಬೂಳ, ಅಮೃತಪ್ಪ ಅಣೂರ ಕವಿ, ರಾಜೇಂದ್ರ ಝಳಕಿ, ವಿನೋದಕುಮಾರ ಜೇ.ಎಸ್., ಮಲ್ಲಿನಾಥ ಸಂಗಶೆಟ್ಟಿ, ದಿನೇಶ ಮದಕರಿ, ಜ್ಯೋತಿ ಕೋಟನೂರ, ಶಿವಲೀಲಾ ಕಲಗುರ್ಕಿ, ರಾಜೇಶ ನೀಲಹಳ್ಳಿ, ಧರ್ಮರಾಜ ಜವಳಿ, ವಿಜಯಕುಮಾರ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.






