ಕಲಬುರಗಿ | ದೇಶದ ಸ್ವಾತಂತ್ರ್ಯ, ನವನಿರ್ಮಾಣದಲ್ಲಿ ಮುಸ್ಲಿಮರ ಪಾತ್ರ ದೊಡ್ದದು : ಕೋರಣೇಶ್ವರ ಮಹಾಸ್ವಾಮೀಜಿ

ಕಲಬುರಗಿ: ದೇಶದ ಸ್ವಾತಂತ್ರ್ಯ ಮತ್ತು ನವನಿರ್ಮಾಣದಲ್ಲಿ ಮುಸ್ಲಿಮರ ಪಾತ್ರ ದೊಡ್ಡದಿದೆ ಎಂದು ಆಳಂದದ ಕೋರಣೇಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ 'ಸೀರತ್-ಉನ್-ನಬಿ ಸ್ಟಡಿ ಅಂಡ್ ರಿಸರ್ಚ್ ಸೆಂಟರ್, ಕರ್ನಾಟಕ' ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅತ್ಯಂತ ಭವ್ಯವಾದ "ಜಲ್ಸಾ ರಹ್ಮತುಲ್ ಲಿಲ್ ಆಲಮೀನ್" ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ದರ್ಗಾ ಹಝರತ್ ಖ್ವಾಜಾ ಬಂದೇ ನವಾಜ್ (ರ) ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಡಾ. ಹಾಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಪ್ರವಾದಿ ಮುಹಮ್ಮದರ ಜೀವನವು ಇಡೀ ಮಾನವಕುಲಕ್ಕೆ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಮಾರ್ಗದರ್ಶಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ದರ್ಗಾ ಶೇಖ್ ದಕ್ಕನ್ ಸಜ್ಜಾದಾ ನಶೀನ್ ಹಝರತ್ ಡಾ.ಶೇಖ್ ಶಾ ಮೊಹಮ್ಮದ್ ಅಫ್ಜಲುದ್ದೀನ್ ಜುನೈದಿ ಅವರೂ ಸಹ ಸಮಾರಂಭದ ನೇತೃತ್ವ ವಹಿಸಿದ್ದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ :
ಪ್ರವಾದಿ ಮುಹಮ್ಮದರ ಜೀವನ ಚರಿತ್ರೆಯ ಕುರಿತು ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ 150ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ 210ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ಹಸನ್-ಎ-ಖಿರಾತ್, ನಾತ್ ಖ್ವಾನಿ, ಹದೀಸ್ ಕಂಠಪಾಠ, ಭಾಷಣ ಮತ್ತು ಸೀರತ್ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸೌಹಾರ್ದತೆ ಮತ್ತು ಸನ್ಮಾನ :
ಸೌಹಾರ್ದತೆಯ ಸಂಕೇತವಾಗಿ ಡಾ.ಮುಹಮ್ಮದ್ ಅಸ್ಗರ್ ಚುಲಬುಲ್ ಅವರು ವಿವಿಧ ಕ್ಷೇತ್ರಗಳ ಗಣ್ಯರಾದ ಡಾ.ದಾಕ್ಷಾಯಿಣಿ ಎಸ್.ಅಪ್ಪಾ (ಕುಲಪತಿಗಳು, ಎಸ್.ಬಿ. ವಿವಿ), ಜ್ಞಾನಪ್ರಕಾಶ್ ಸ್ವಾಮೀಜಿ, ಸಿದ್ದರಾಮಾನಂದ ಸ್ವಾಮೀಜಿ, ಬಸವರಾಜ್ ದೇಶಮುಖ್, ಮಹಾಂತೇಶ್ ಕೋಗಲಿ, ಡಾ.ಶರಣಬಸಪ್ಪ (ಬ್ರಹ್ಮಕುಮಾರಿ ಆಶ್ರಮ), ಸೈಯದ್ ಫಹಿಂ ಹುಸೇನಿ, ಜಸ್ವೀರ್ ಸಿಂಗ್ ಛಾಬ್ರಾ ಮತ್ತು ದೀಪ್ ಸಿಂಗ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರವಾದಿಗಳ ಬೋಧನೆಗಳ ಕುರಿತಾದ ಕನ್ನಡ ಮತ್ತು ಇಂಗ್ಲಿಷ್ ಅನುವಾದಿತ ಪುಸ್ತಕಗಳನ್ನು ಗಣ್ಯರಿಗೆ ವಿತರಿಸಲಾಯಿತು.
ವಿಶೇಷ ಪ್ರಶಸ್ತಿಗಳ ಪ್ರದಾನ :
ರಹ್ಮತುಲ್ ಲಿಲ್ ಆಲಮೀನ್ ಪ್ರಶಸ್ತಿ: ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಡಾ.ಸೈಯದ್ ಖಲೀಲುಲ್ಲಾ ಓವೈಸಿ ಬುಖಾರಿ ಮತ್ತು ಮೌಲಾನಾ ಅತೀಕ್ ಅಹ್ಮದ್ ಖಾಸಿಮಿ ಅವರಿಗೆ ಈ ಗೌರವ ನೀಡಲಾಯಿತು.
ಮಾಧ್ಯಮ ಸೇವೆ: ಹಿರಿಯ ಪತ್ರಕರ್ತರಾದ ಟಿ.ವಿ.ಶಿವಾನಂದನ್, ಶೇಷಮೂರ್ತಿ ಅವಧಾನಿ ಮತ್ತು ಶ್ರೀನಿವಾಸ್ ಸಿರನೂರ್ಕರ್ ಅವರಿಗೆ ಮಾಧ್ಯಮ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಚಾಲಕ ಡಾ.ಮುಹಮ್ಮದ್ ಅಸ್ಗರ್ ಚಲ್ಬುಲ್ ಮಾತನಾಡಿದರು. ಮೌಲಾನಾ ನಜೀರ್ ಅಹ್ಮದ್ ರಶಾದಿ ಅವರು ಕಾರ್ಯಕ್ರಮ ನಿರೂಪಿಸಿದರು. ಮೌಲಾನಾ ಯೂಸುಫ್ ಖುರೇಷಿ ವಂದಿಸಿದರು.







