Kalaburagi | SIR ಅಂತಿಮ ಮತದಾರರ ಪಟ್ಟಿಯಿಂದ ಹೆಸರುಗಳು ನಾಪತ್ತೆ: ಗುರುತಿನ ಚೀಟಿಯೊಂದಿಗೆ ಮೂವರು ಮತದಾರರು ಪ್ರತ್ಯಕ್ಷ

ಅಂಬರಾಯ್ಯ ಮರತೂರ್, ಡಾ. ಸಂಪತ್ ರಾವ್, ಎಂಡಿ ಅತಿಕ್
ಕಲಬುರಗಿ : ಎಸ್ಐಆರ್ ಅಂತಿಮ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ವೈದ್ಯರೊಬ್ಬರು, ರೈತರೊಬ್ಬರು ಹಾಗೂ ಕೂಲಿ ಕಾರ್ಮಿಕರೊಬ್ಬರು ಮತದಾರರ ಗುರುತಿನ ಚೀಟಿಗಳೊಂದಿಗೆ ಶುಕ್ರವಾರ ನಗರದಲ್ಲಿ ಪ್ರತ್ಯಕ್ಷರಾಗಿ ಚುನಾವಣಾ ಆಯೋಗದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ವೈದ್ಯ ಡಾ. ಪಿ. ಸಂಪತ್ ರಾವ್ (70), ಮರತೂರಿನ ರೈತ ಅಂಬರಾಯ್ಯ (60) ಹಾಗೂ ಯಾದಗಿರಿಯ ಎಂ.ಡಿ. ಅತೀಕ್ (35), ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರುಗಳು ನಾಪತ್ತೆಯಾಗಿವೆ ಎಂದು ದೂರಿದರು.
ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಮತದಾನ ಮಾಡುತ್ತಿರುವ ತಮ್ಮ ಹೆಸರನ್ನು ಯಾವುದೇ ಸಮರ್ಪಕ ಪರಿಶೀಲನೆ ನಡೆಸದೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಡಾ.ಸಂಪತ್ ರಾವ್ ಅಳಲು ತೋಡಿಕೊಂಡರು. ಬಿಎಲ್ಒ ಮೂಲಕ ಗಣತಿ ನಮೂನೆ ಪಡೆದು ಭರ್ತಿ ಮಾಡಿದ್ದೆ. ಅದನ್ನು ಮನೆಯ ಕೆಲಸದವರಿಂದ ಪಡೆದುಕೊಳ್ಳುವಂತೆ ತಿಳಿಸಿ, ಮಗಳ ಮನೆಗೆ ತೆರಳಿದ್ದೆ. ಆದರೆ, ಬಿಎಲ್ಒ ಮನೆಗೆ ಬಂದು ನಮೂನೆ ಸಂಗ್ರಹಿಸಿಲ್ಲ. ಇದೀಗ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರಿನ ಎದುರು ‘ಶಾಶ್ವತ ಸ್ಥಳಾಂತರ’ ಎಂದು ನಮೂದಿಸಲಾಗಿದೆ. ಈ ಬಗ್ಗೆ ವಿಚಾರಿಸಿದಾಗ ಹೆಸರು ಅಳಿಸಲಾಗಿದೆ ಎಂದು ತಿಳಿಸಿ, ಮತ್ತೆ ಸೇರ್ಪಡೆಗೊಳಿಸಲು ಫಾರ್ಮ್-6 ಸಲ್ಲಿಸುವಂತೆ ಸೂಚಿಸಿದ್ದಾರೆ. ಈಗಾಗಲೇ ಮತದಾರರಾಗಿರುವ ತಮಗೆ ಹೊಸ ಮತದಾರರಂತೆ ಅರ್ಜಿ ಸಲ್ಲಿಸುವಂತೆ ಹೇಳುತ್ತಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮರತೂರು ಗ್ರಾಮದ ರೈತ ಅಂಬರಾಯ್ಯ ಹಾಗೂ ಯಾದಗಿರಿಯ ಎಂ.ಡಿ. ಅತೀಕ್ ಮಾತನಾಡಿ, ಬಿಎಲ್ಒಗಳು ತಮಗೆ ಗಣತಿ ನಮೂನೆ ನೀಡಿಲ್ಲ. ಮತದಾರರ ಗುರುತಿನ ಚೀಟಿ ಹಿಡಿದುಕೊಂಡು ಅಲೆದಾಡಿದರೂ ನಮೂನೆ ಸಿಕ್ಕಿಲ್ಲ. ಇದೀಗ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಎಲ್ಒಗಳನ್ನು ವಿಚಾರಿಸಿದರೆ ಪಟ್ಟಿಯಲ್ಲಿ ಹೆಸರು ಇಲ್ಲ ಎನ್ನುತ್ತಾರೆ. ಮುಂದೆ ನೋಡೋಣ ಎಂದು ಹೇಳಿ ಕಳುಹಿಸುತ್ತಿದ್ದಾರೆ ಎಂದು ದೂರಿದರು.
ತಾವು ಅನಕ್ಷರಸ್ಥರಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ತಿಳಿದಿಲ್ಲ. ಹೀಗಾಗಿ ಅಸಹಾಯಕರಾಗಿದ್ದೇವೆ. ತಮ್ಮ ಗ್ರಾಮವೊಂದರಲ್ಲೇ ಇಂತಹ ಸಮಸ್ಯೆ ಎದುರಿಸುತ್ತಿರುವ 20ಕ್ಕೂ ಹೆಚ್ಚು ಮತದಾರರಿದ್ದಾರೆ. ಗ್ರಾಮದಲ್ಲಿರುವ ವಿದ್ಯಾವಂತರೂ ನೆರವಿಗೆ ಬರುತ್ತಿಲ್ಲ ಎಂದು ಅಂಬರಾಯ್ಯ ಬೇಸರ ವ್ಯಕ್ತಪಡಿಸಿದರು.
ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಅಂತಿಮ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಅರ್ಹ ಮತದಾರರ ಹಕ್ಕು ಕಸಿಯದಂತೆ ಚುನಾವಣಾ ಆಯೋಗ ತಕ್ಷಣ ಪರಿಶೀಲನೆ ನಡೆಸಿ, ಹೆಸರುಗಳನ್ನು ಕೈಬಿಡಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ತಪ್ಪುಗಳನ್ನು ಸರಿಪಡಿಸಿ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.






