Kalaburagi | ನಾರಾಯಣ ಗುರು, ನುಲಿಯ ಚಂದಯ್ಯ ಜಯಂತಿ ಆಚರಿಸದ ಆರೋಪ: ಮುಖ್ಯಶಿಕ್ಷಕ ಅಮಾನತು

ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶ್ರೀ ನುಲಿಯ ಚಂದಯ್ಯ ಅವರ ಜಯಂತಿಗಳನ್ನು ಶಾಲೆಯಲ್ಲಿ ಆಚರಿಸದ ಆರೋಪದಡಿ ಚಿತ್ತಾಪುರ ತಾಲ್ಲೂಕಿನ ಅರಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವಾನಂದ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ.
ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಆನಂದಗೌಡ ಬಿರಾದಾರ ಅವರು ಅಕ್ಟೋಬರ್ 12ರಂದು ಅಮಾನತು ಆದೇಶ ಹೊರಡಿಸಿದ್ದಾರೆ.
2026ರ ಆಗಸ್ಟ್ 28ರಂದು ಶಾಲೆಯಲ್ಲಿ ಇಬ್ಬರೂ ಮಹನೀಯರ ಜಯಂತಿಗಳನ್ನು ಆಚರಿಸುವಂತೆ ಶಿಕ್ಷಣ ಇಲಾಖೆಯು ಆಗಸ್ಟ್ 25ರಂದು ಸೂಚಿಸಿತ್ತು. ಆದರೆ, ಜಯಂತಿಗಳನ್ನು ಆಚರಿಸಿಲ್ಲ ಎಂದು ಆರೋಪಿಸಿ ಭೀಮ್ ಆರ್ಮಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣುಸ್ವಾಮಿ ಎನ್. ಹಾಗೂ ರಿಪಬ್ಲಿಕನ್ ಯೂತ್ ಫೋರ್ಸ್ ದಲಿತ ಲಿಬರೇಷನ್ ಆರ್ಮಿಯ ಕಾಳಗಿ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಿ. ವಿರನ್ ಅವರು ಸೆಪ್ಟೆಂಬರ್ 18ರಂದು ದೂರು ಸಲ್ಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಅರಣಕಲ್ ವಲಯದ ಸಿಆರ್‌ಪಿ ಸೆಪ್ಟೆಂಬರ್ 21ರಂದು ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದರು. ಬಳಿಕ ಅಕ್ಟೋಬರ್ 1ರಂದು ಮುಖ್ಯಶಿಕ್ಷಕರಿಗೆ ಕಾರಣ ಕೇಳುವ ನೋಟಿಸ್ ನೀಡಲಾಗಿತ್ತು. ಮುಖ್ಯಶಿಕ್ಷಕರು ಅಕ್ಟೋಬರ್ 5ರಂದು ಸಲ್ಲಿಸಿದ ಲಿಖಿತ ಹೇಳಿಕೆಯನ್ನು ಪರಿಶೀಲಿಸಿದ ನಂತರವೂ ಜಯಂತಿಗಳನ್ನು ಆಚರಿಸದಿರುವುದು ಕಂಡುಬಂದಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಆದೇಶ ಪಾಲಿಸದೆ ಕರ್ತವ್ಯಲೋಪ ಎಸಗಿರುವುದು ಹಾಗೂ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿ-2021ರ ನಿಯಮ 3ರ ಉಪನಿಯಮಗಳಾದ (1), (2) ಮತ್ತು (3) ಉಲ್ಲಂಘಿಸಿರುವ ಆರೋಪದಡಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಮುಖ್ಯಶಿಕ್ಷಕರು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.






