Kalaburagi | ಹಾಪ್‌ಕಾಮ್ಸ್ ಆರ್ಥಿಕ ಬಲವರ್ಧನೆಗೆ ಅಗತ್ಯ ಕ್ರಮ: ಮಲ್ಲಿಕಾರ್ಜುನ ಭೂಶೆಟ್ಟಿ
2025–26ನೇ ಸಾಲಿನ 27ನೇ ವಾರ್ಷಿಕ ಮಹಾಸಭೆ

ಕಲಬುರಗಿ: ಕಲಬುರಗಿ–ಯಾದಗಿರಿ ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆಯನ್ನು ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸುವ ಜತೆಗೆ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಿ. ಭೂಶೆಟ್ಟಿ ಹೇಳಿದರು.
ಸಂಸ್ಥೆಯ ಕಚೇರಿ ಆವರಣದಲ್ಲಿ ನಡೆದ 2025–26ನೇ ಸಾಲಿನ 27ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷರು, ನಿರ್ದೇಶಕರು, ಸದಸ್ಯರು ಹಾಗೂ ಪ್ರಗತಿಪರ ರೈತರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಅವರು ನಿರ್ದೇಶಕರು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ಬಳಿಕ ಉಪಾಧ್ಯಕ್ಷ ಸುಭಾಷಚಂದ್ರ ಬೋವಿ ಅವರು ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು.
ವ್ಯವಸ್ಥಾಪಕ ನಿರ್ದೇಶಕ ಅನಿಲ ರಾಠೋಡ ಅವರು 2025–26ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ಅಡವಿಗೆ ಸಂಬಂಧಿಸಿದ ಅನುದಾನ ಹಾಗೂ 2026–27ನೇ ಸಾಲಿಗೆ ಕಾಯ್ದಿರಿಸಿರುವ ಅನುದಾನದ ವಿವರಗಳನ್ನು ಸಭೆಗೆ ತಿಳಿಸಿದರು. ಸಂಸ್ಥೆಯ ಬೈಲಾ ತಿದ್ದುಪಡಿ, ಹೆಚ್ಚುವರಿ ಖರ್ಚುಭರಿಸಿದ ಅನುದಾನ ಹಾಗೂ ಕಾಯ್ದಿರಿಸಿದ ಅನುದಾನಕ್ಕೆ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ನೀಡಲಾಯಿತು.
ಸಂಸ್ಥೆಯ ನಿರ್ದೇಶಕರಾದ ತಿಪ್ಪಣ್ಣ ರೆಡ್ಡಿ ಎಲ್. ಮತ್ತು ಬಸವರಾಜ ಆರ್. ಪಾಟೀಲ ಮಾತನಾಡಿ, ಹಾಪ್‌ಕಾಮ್ಸ್‌ನ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು, ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವುದು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಸಲಹೆ–ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸದಸ್ಯರು ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಸದಸ್ಯರ ಮಕ್ಕಳಿಗೆ ಬಹುಮಾನ ನೀಡುವಂತೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಸ್ಟಾರ್‌ಫ್ರೂಟ್ ಬೆಳೆ ಬೆಳೆಯುತ್ತಿರುವ ಹಡಗಿಲಹಾರುತಿ ಗ್ರಾಮದ ರೈತ ಮಹಿಳೆ ಶೀಲಾ ಹತ್ತಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಹಲವು ಪ್ರಗತಿಪರ ರೈತರನ್ನು ಗೌರವಿಸಿ, ಅವರ ಕೃಷಿ ಸಾಧನೆಯನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಗುರುಶಾಂತ ಪಾಟೀಲ, ಉಮಾರೆಡ್ಡಿ ಭಾಸರೆಡ್ಡಿ, ರಾಜಕುಮಾರ ಕೋಟಿ, ವ್ಯವಸ್ಥಾಪಕ ಪಾಂಡುರಂಗ ಬಿ.ಎಂ. ಸೇರಿದಂತೆ ನಿರ್ದೇಶಕರು, ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.






