Kalaburagi | ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು: ಅಝೀಝುಲ್ಲಾ ಸರ್ ಮಸ್ತ್
‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ’ ಉಪನ್ಯಾಸ ಕಾರ್ಯಕ್ರಮ

ಕಲಬುರಗಿ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪತ್ರಿಕೆಗಳು ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ, ಸ್ವಾತಂತ್ರ್ಯದ ಹಂಬಲ ಹಾಗೂ ಬ್ರಿಟಿಷರ ವಿರುದ್ಧ ಹೋರಾಟದ ಮನೋಭಾವ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಉರ್ದು ಪತ್ರಿಕೆಯ ಸಂಪಾದಕ ಅಝೀಝುಲ್ಲಾ ಸರ್ ಮಸ್ತ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಕಲಬುರಗಿ ಘಟಕ ಆಯೋಜಿಸಿದ್ದ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ, ಉರ್ದು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಪತ್ರಿಕೆಗಳು ಬ್ರಿಟಿಷರ ದಬ್ಬಾಳಿಕೆ ಹಾಗೂ ಅನ್ಯಾಯದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪತ್ರಿಕೆ ಎಂದರೆ ಕೇವಲ ಸುದ್ದಿಮಾಧ್ಯಮವಲ್ಲ, ಅದು ಸತ್ಯದ ಧ್ವನಿ ಹಾಗೂ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸುವ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಉರ್ದು ಪತ್ರಿಕೆಗಳ ಸಂಪಾದಕರು ಮತ್ತು ಪತ್ರಕರ್ತರು ಸ್ವಾತಂತ್ರ್ಯ ಹೋರಾಟದ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಪತ್ರಿಕೆಯನ್ನು ಭಾಷೆಯ ಆಧಾರದಲ್ಲಿ ವಿಂಗಡಿಸದೆ, ಪತ್ರಿಕೋದ್ಯಮದ ಧ್ವನಿಯಾಗಿ ನೋಡಬೇಕು ಎಂದು ಅವರು ತಿಳಿಸಿದರು.
ಪತ್ರಿಕೆಗಳ ಇತಿಹಾಸ ದಾಖಲಿಸುವ ಅಗತ್ಯ :
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಅಸಗರ್ ಚುಲ್ಬುಲ್ ಮಾತನಾಡಿ, ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಪಾದಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದರು.
ಕಲಬುರಗಿ ಜಿಲ್ಲೆಯ ಪತ್ರಿಕೆಗಳ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸಲು ‘ಕಲಬುರಗಿ ಜಿಲ್ಲಾ ಪತ್ರಿಕೆಗಳ ಪರಿಚಯ’ ಪುಸ್ತಕ ಪ್ರಕಟಿಸುವ ಅಗತ್ಯವಿದ್ದು, ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಆನಂದ ಪಿ. ಮಣೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಂಘಕ್ಕೆ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು. ಯುವ ಪತ್ರಕರ್ತರು ಮತ್ತು ಸಂಪಾದಕರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಂಘ ಸದಾ ಸಿದ್ಧವಿದೆ ಎಂದು ಹೇಳಿದರು.
ಸಂಪಾದಕ ಚಂದ್ರಕಾಂತ ಬಿರಾದಾರ್ ಮಾತನಾಡಿ, ಕನ್ನಡ ಪತ್ರಿಕೆಗಳು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಚಿಂತನೆ ಮತ್ತು ಸ್ವಾತಂತ್ರ್ಯದ ಆಶಯಗಳನ್ನು ಗ್ರಾಮೀಣ ಪ್ರದೇಶಗಳಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ವಿವರಿಸಿದರು.
ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು. ಆರಂಭದಲ್ಲಿ ಸಂಘದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಾಬುರಾವ್ ಕೋಬಾಳ ಸ್ವಾಗತ ಗೀತೆ ಹಾಡಿದರು. ಸಿದ್ದಣ್ಣ ಯಡಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹವನೂರ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಪಾದಕರು, ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.






