ಕಲಬುರಗಿ | ʼಭ್ರಷ್ಟಾಚಾರ ಮುಕ್ತ ಆಳಂದʼ ಆಂದೋಲನಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ

ಕಲಬುರಗಿ: ಆಳಂದ ತಾಲ್ಲೂಕಿನ ಜನತೆ ದೀರ್ಘಕಾಲದಿಂದ ಭ್ರಷ್ಟಾಚಾರದ ದಂಗುಬಡಿಕೆಯಿಂದ ಬೆಸತ್ತಿದ್ದಾರೆ. ಜನಪ್ರತಿನಿಧಿಗಳು ಜನರಿಗೆ ಒಡ್ಡುತ್ತಿರುವ ದೌರ್ಜನ್ಯ, ಅನ್ಯಾಯ ಮತ್ತು ಅವ್ಯವಸ್ಥೆಗೆ ಕೊನೆ ಹಾಡಬೇಕಿದೆ. ಈ ಕಾರಣಕ್ಕಾಗಿ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್.ವಾಲಿ ನೇತೃತ್ವದಲ್ಲಿ ಆರಂಭಿಸಿದ ʼಭ್ರಷ್ಟಾಚಾರ ಮುಕ್ತ ಆಳಂದ ಆಂದೋಲನʼವು ಕ್ಷೇತ್ರದಲ್ಲಿ ಜನರ ಆಕಾಂಕ್ಷೆಗಳಿಗೆ ಧ್ವನಿಯಾಗಲಿದೆ ಎಂದು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಭ್ರಷ್ಟಾಚಾರ ಮುಕ್ತ ಆಳಂದ ಆಂದೋಲನ ಮತ್ತು ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ಕಲಬುರಗಿಯಲ್ಲಿ ನಡೆದ ಪಕ್ಷದ ಸಮಾರಂಭದಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈ ಆಂದೋಲನ ಮೂಲಕ ಜೆಡಿಎಸ್‌ನ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು, ಆಳಂದದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಆಂದೋಲನದ ನೇತೃತ್ವ ವಹಿಸಿದ್ದಾರೆ. ಈ ಆಂದೋಲನವು ಜನರಿಗೆ ನ್ಯಾಯ ಒದಗಿಸುವ ಜೊತೆಗೆ ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
“ನಾವು ಜನರ ಶಕ್ತಿಯನ್ನು ಒಗ್ಗೂಡಿಸಿ, ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವೆವು. ವಾಲಿ ಅವರ ದಿಟ್ಟ ನಾಯಕತ್ವದಲ್ಲಿ, ಈ ಆಂದೋಲನವು ಆಳಂದದ ಜನತೆಗೆ ಆಶಾಕಿರಣವಾಗಲಿದೆ. ಈ ಆಂದೋಲನವು ಒಬ್ಬರಿಂದ ಆರಂಭವಾಗಿಲ್ಲ, ಇದು ಆಳಂದದ ಜನರ ಆಕಾಂಕ್ಷೆಯ ಧ್ವನಿಯಾಗಿದೆ. ಒಗ್ಗಟ್ಟಿನಿಂದ ನಾವು ಭ್ರಷ್ಟಾಚಾರವನ್ನು ಕಿತ್ತೊಗೆಯಬಹುದು. ಮಹೇಶ್ವರಿ ವಾಲಿ ಅವರ ನಾಯಕತ್ವಕ್ಕೆ ಬೆಂಬಲ ನೀಡಿ, ಆಳಂದವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ,” ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹೇಶ್ವರಿ ಎಸ್. ವಾಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರು, ವೆಂಕಟೇಶ ರಾಠೋಡ ಸೇರಿ ಹಲವಾರು ಮುಖಂಡರು, ಕಾರ್ಯಕರ್ತರು, ಸ್ಥಳೀಯ ಆಳಂದದ ಕಾರ್ಯಕರ್ತರು ಭಾಗವಹಿಸಿದ್ದರು.







