Kalaburagi | ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಬೇಡ: ರಾಯಪ್ಪ ಹುಣಸಗಿ ಸೂಚನೆ

ಕಲಬುರಗಿ: ಜಿಲ್ಲೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರೊಂದಿಗೆ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡಬಾರದು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆಯಡಿ ವಿವಿಧ ಇಲಾಖೆಗಳ ಅರ್ಜಿಗಳ ವಿಲೇವಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ವಿವಿಧ ಪರವಾನಗಿಗಳು ಹಾಗೂ ನಿರಾಕ್ಷೇಪಣಾ ಪತ್ರಗಳನ್ನು (ಎನ್‌ಒಸಿ) ಪಡೆಯಲು ಬೇರೆ ಬೇರೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಡಿ ಅರ್ಜಿದಾರರು ಒಂದೇ ಕಡೆ ಅರ್ಜಿ ಸಲ್ಲಿಸಿದರೆ ಸಾಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಸಿಂಗಲ್ ವಿಂಡೋ ವ್ಯವಸ್ಥೆಯಡಿ ವಿವಿಧ ಸೇವೆಗಳು :
ಶಸ್ತ್ರಾಸ್ತ್ರ ಪರವಾನಗಿ: ಶಸ್ತ್ರಾಸ್ತ್ರ ಕಾಯ್ದೆ-1959ರ ಅಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗಾಗಿ ಅರ್ಜಿದಾರರ ಹಿನ್ನೆಲೆಗೆ ಸಂಬಂಧಿಸಿದ ಪೊಲೀಸ್ ವರದಿಯನ್ನು 30 ದಿನಗಳೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಪೆಟ್ರೋಲ್ ಪಂಪ್ ಎನ್‌ಒಸಿ: ಪೆಟ್ರೋಲಿಯಂ ಕಾಯ್ದೆ-1934ರ ಅಡಿಯಲ್ಲಿ ಪೆಟ್ರೋಲ್ ಪಂಪ್ ಸ್ಥಾಪನೆಗೆ ಅಗತ್ಯವಿರುವ ಅಗ್ನಿಶಾಮಕ, ವಿದ್ಯುತ್ ಸುರಕ್ಷತೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವರದಿಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ಸ್ಫೋಟಕ ಪರವಾನಗಿ: ಸ್ಫೋಟಕ ಕಾಯ್ದೆ-1884ರ ಅಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಬೇಕು. ಸುರಕ್ಷಿತ ಅಂತರ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಂಡ ನಂತರವೇ ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ತಿಳಿಸಿದರು.
ಪತ್ರಿಕೆ ನೋಂದಣಿ: ಪ್ರೆಸ್ ಸೇವಾ ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ 60 ದಿನಗಳೊಳಗೆ ಆಕ್ಷೇಪಣೆ ಅಥವಾ ಅಭಿಪ್ರಾಯಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದರು.
ಸಿನಿಮಾ ಪರವಾನಗಿ: ಕರ್ನಾಟಕ ಚಲನಚಿತ್ರ (ನಿಯಂತ್ರಣ) ಕಾಯ್ದೆ-1964ರ ಅಡಿಯಲ್ಲಿ ಹೊಸ ಪರವಾನಗಿ, ನವೀಕರಣ ಹಾಗೂ ಮರುಮಂಜೂರಾತಿಗೆ ಸಂಬಂಧಿಸಿದಂತೆ ಅಗ್ನಿ ಸುರಕ್ಷತೆ, ವಿದ್ಯುತ್ ಸುರಕ್ಷತೆ ಮತ್ತು ಕಟ್ಟಡದ ಸುರಕ್ಷತೆಗೆ ಸಂಬಂಧಿಸಿದ ವರದಿಗಳನ್ನು ಪಡೆದು ಕ್ರಮ ಕೈಗೊಳ್ಳಬೇಕು ಎಂದರು.
ಹಿಟ್ ಆ್ಯಂಡ್ ರನ್ ಪರಿಹಾರ: ಹಿಟ್ ಆ್ಯಂಡ್ ರನ್ ಮೋಟಾರು ಅಪಘಾತ ಪರಿಹಾರ ಯೋಜನೆ-2022ರ ಅಡಿಯಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಬೇಕು. ವಿಚಾರಣಾಧಿಕಾರಿಗಳು ಎಫ್‌ಐಆರ್ ಹಾಗೂ ಮರಣೋತ್ತರ ಪರೀಕ್ಷಾ ವರದಿಯನ್ನು ಪಡೆದು, 15 ದಿನಗಳೊಳಗೆ ಕ್ಲೈಮ್ಸ್ ಸೆಟಲ್‌ಮೆಂಟ್ ಕಮಿಷನರ್ ಅವರಿಗೆ ಕಳುಹಿಸಬೇಕು ಎಂದು ಸೂಚಿಸಿದರು.
ಗಣಿಗಾರಿಕೆ: ಕಟ್ಟಡ ಕಲ್ಲು, ಶಹಾಬಾದ್ ಕಲ್ಲು, ಪಟ್ಟಾ ಜಮೀನಿನ ಮರಳು ಹಾಗೂ ಕ್ರಷರ್‌ಗಳಿಗೆ ಸಂಬಂಧಿಸಿದ ನಿರಾಕ್ಷೇಪಣಾ ಪತ್ರಗಳನ್ನು ಜಿಲ್ಲಾ ಕಾರ್ಯಪಡೆಯ ಮೂಲಕ ನೀಡಬೇಕು. ಈ ಸಂಬಂಧ ನೋಡಲ್ ಅಧಿಕಾರಿಗಳು ಏಳು ದಿನಗಳೊಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
ಸಿಂಗಲ್ ವಿಂಡೋ ವ್ಯವಸ್ಥೆಯಡಿ ಅರ್ಜಿದಾರರು ಒಂದೇ ಸ್ಥಳದಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಉಳಿದ ಪ್ರಕ್ರಿಯೆಗಳನ್ನು ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯದಿಂದ ಪೂರ್ಣಗೊಳಿಸಬೇಕು. ಯಾವುದೇ ಇಲಾಖೆಯಲ್ಲಿ ಅರ್ಜಿಗಳು ಬಾಕಿ ಉಳಿಯದಂತೆ ಇದೇ ಶನಿವಾರದೊಳಗೆ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತು ಪ್ರಗತಿ ಪರಿಶೀಲಿಸಲು ಮುಂದಿನ ಸಭೆಯನ್ನು ಸೋಮವಾರ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.






