ಕಲಬುರಗಿ | ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿಲ್ಲ: ಶಶೀಲ್ ನಮೋಶಿ

ಕಲಬುರಗಿ: ಬೆಳಗಾವಿಯ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು, ಸೂಕ್ತ ಚರ್ಚೆಗಳಿಗೆ ಸಮಯಾವಕಾಶವೇ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಲಾಗುತ್ತದೆ. ಆದರೆ ಕಲ್ಯಾಣ ಕರ್ನಾಟಕ ಭಾಗವು ಬಡತನ, ಮೂಲಭೂತ ಸೌಕರ್ಯ, ಶಿಕ್ಷಣ ಹಾಗೂ ನೀರಾವರಿ ಯೋಜನೆಗಳಲ್ಲಿ ಅತ್ಯಂತ ಹಿಂದುಳಿದಿದ್ದರೂ, ಈ ಬಗ್ಗೆ ಸಮರ್ಪಕ ಚರ್ಚೆ ನಡೆದಿಲ್ಲ ಎಂದು ಟೀಕಿಸಿದರು. ಉತ್ತರ ಕರ್ನಾಟಕ ಅಧಿವೇಶನವೆಂದು ಹೇಳಿಕೊಂಡು ಕೇವಲ ಬೆಳಗಾವಿ ಹಾಗೂ ಹುಬ್ಬಳ್ಳಿ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯಮಟ್ಟದ ನೇಮಕಾತಿಗಳಲ್ಲಿ ಸಂವಿಧಾನದ 371 (ಜೆ) ವಿಧಿಯ ಅಡಿಯಲ್ಲಿ ಸಿಗಬೇಕಾದ ಶೇ.8ರಷ್ಟು ಮೀಸಲಾತಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿಲ್ಲ. ಇದರಿಂದ ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಭಾರೀ ಅನ್ಯಾಯವಾಗುತ್ತಿದೆ. ಮೀಸಲಿಟ್ಟಿರುವ ಹುದ್ದೆಗಳನ್ನು ‘ಬ್ಯಾಕ್‌ಲಾಗ್’ ಹುದ್ದೆಗಳೆಂದು ತೋರಿಸಿ, ನಂತರ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲಾಗುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಬಡ್ತಿ ವಿಷಯದಲ್ಲಿಯೂ ತಾರತಮ್ಯ ನಡೆಯುತ್ತಿದ್ದು, ರೋಸ್ಟರ್ ಪದ್ಧತಿಯನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ ಎಂದು ಆಪಾದಿಸಿದರು.
ಇದಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ವಿಮಾನ ಸೇವೆ ರದ್ದಾಗಿರುವ ಹಿನ್ನೆಲೆಯಲ್ಲಿ, ಬೀದರ್ ವಿಮಾನ ನಿಲ್ದಾಣದಲ್ಲಿ ಕೆಕೆಆರ್‌ಡಿಬಿ ಅನುದಾನದಡಿಯಲ್ಲಿ ಸೇವೆ ನಡೆಸುತ್ತಿರುವ ಮಾದರಿಯಲ್ಲೇ ಕಲಬುರಗಿಯಲ್ಲೂ ಕೆಕೆಆರ್‌ಡಿಬಿ ಅನುದಾನದಡಿ ವಿಮಾನ ಸೇವೆ ಒದಗಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಶಶೀಲ್ ನಮೋಶಿ ಅವರು ಒತ್ತಾಯಿಸಿದರು.
ಕಲಬುರಗಿಯಲ್ಲಿ ಅಧಿವೇಶನ ಮಾಡಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ಸಮಸ್ಯೆಗಳಿವೆ. ಇಲ್ಲಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲೇ ಅಧಿವೇಶನ ನಡೆಸಬೇಕು, ಹಿಂದುಳಿದಿರುವ ಹಣೆಪಟ್ಟಿ ಅಳಿಸಲು ವಿವಿಧ ವಲಯಗಳಿಗೆ ವಿಶೇಷ ಅನುದಾನ ಅಗತ್ಯವಾಗಿದೆ, ಅದನ್ನು ಈಡೇರಿಸಲು ಸರ್ಕಾರ ಪಣ ತೊಡಬೇಕು.
-ಶಶೀಲ್ ನಮೋಶಿ (ಎಂಎಲ್ಸಿ)







