Kalaburagi | ನಿಜಾಮ್ ಬಾಬಾರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿ: ಉಲೆಮಾ-ಎ-ಗುಲ್ಬರ್ಗಾ ಸಂಘಟನೆ ಆಗ್ರಹ

ಕಲಬುರಗಿ: ಸಮಾಜಸೇವಕ, ಇತಿಹಾಸ ಮತ್ತು ಸಾಹಿತ್ಯ ಸಂರಕ್ಷಕರಾಗಿರುವ ಸಯ್ಯದ್ ಯದುಲ್ಲಾ ಹುಸೈನಿ (ನಿಜಾಮ್ ಬಾಬಾ) ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಬೇಕು ಎಂದು ಉಲೆಮಾ-ಎ-ಗುಲಬರ್ಗಾ ಸಂಘಟನೆ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಮೌಲಾನಾ ಸಯ್ಯದ್ ವಾಜಿದ್ ಅಲಿ ಮಾತನಾಡಿ, ನಿಜಾಮ್ ಬಾಬಾ ಅವರು ಸಮಾಜಸೇವೆ, ಜಲ ಸಂರಕ್ಷಣೆ, ಸಾಹಿತ್ಯ, ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆಯ ಸಂರಕ್ಷಣೆಯಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದರು.
2017–18ರಲ್ಲಿ ಕಲಬುರಗಿ ನಗರ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಸಂದರ್ಭದಲ್ಲಿ ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಬಾವಿಗಳನ್ನು ಪುನರುಜ್ಜೀವನಗೊಳಿಸಿ ಸಾರ್ವಜನಿಕರಿಗೆ ದಿನನಿತ್ಯ ಲಕ್ಷಾಂತರ ಲೀಟರ್ ನೀರು ದೊರಕುವಂತೆ ಮಾಡಿದ ಸೇವೆಯಿಂದ ಅವರು ‘ಕಲಬುರಗಿಯ ವಾಟರ್‌ಮ್ಯಾನ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಹಜರತ್ ಖ್ವಾಜಾ ಬಂದಾ ನವಾಜ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನಿಜಾಮ್ ಬಾಬಾ ಅವರು ಸಾವಿರಾರು ಬಡ ಹಾಗೂ ಅಗತ್ಯವಿರುವ ಜನರಿಗೆ ಜಾತಿ-ಧರ್ಮ ಭೇದವಿಲ್ಲದೆ ಉಚಿತ ಅನ್ನಸಂತರ್ಪಣೆ (ಲಂಗರ್) ಕಾರ್ಯಕ್ರಮ ನಡೆಸುತ್ತಿದ್ದಾರೆ. ಸಾಹಿತ್ಯ, ಐತಿಹಾಸಿಕ ಪರಂಪರೆ, ದರ್ಗಾಗಳು ಮತ್ತು ಖಾನ್ಕಾಹ್‌ಗಳ ಸಂರಕ್ಷಣೆ, ಸಾಮೂಹಿಕ ವಿವಾಹಗಳ ಆಯೋಜನೆ ಹಾಗೂ ಉರ್ದು-ಕನ್ನಡ ಅಂತರ್‌ಭಾಷಾ ಮುಶಾಯಿರಾ ಮತ್ತು ಕವಿ ಸಮ್ಮೇಳನಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಇಂತಹ ಬಹುಮುಖ ಸೇವೆಯನ್ನು ಪರಿಗಣಿಸಿ ಸಯ್ಯದ್ ಯದುಲ್ಲಾ ಹುಸೈನಿ (ನಿಜಾಮ್ ಬಾಬಾ) ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಳಿಸುವಂತೆ ರಾಜ್ಯ ಸರ್ಕಾರವನ್ನು ಸಂಘಟನೆ ಆಗ್ರಹಿಸಿತು.
ಸುದ್ದಿಗೋಷ್ಠಿಯಲ್ಲಿ ಉಲೆಮಾ-ಎ-ಗುಲಬರ್ಗಾ ಸಂಘಟನೆಯ ಉಪಾಧ್ಯಕ್ಷ ಮೌಲಾನಾ ಸಯ್ಯದ್ ಅಕ್ಬರ್ ಅಲಿ, ಹಾಫಿಜ್ ಮೊಹಮ್ಮದ್ ಶಫಿ, ಹಾಫಿಜ್ ಮೊಹಮ್ಮದ್ ಮಖ್ದೂಮ್ ಹಾಗೂ ಮೌಲಾನಾ ಮೊಹಮ್ಮದ್ ಯೂಸುಫ್ ಖುರೈಶಿ ಉಪಸ್ಥಿತರಿದ್ದರು.






