Kalaburagi | ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ

ಕಲಬುರಗಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ದ್ವೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದೆ. ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ಅವರು ಮಂಗಳವಾರ ಅಧಿಸೂಚನೆ ಪ್ರಕಟಿಸಿದ್ದಾರೆ.
ಚುನಾವಣಾ ಅಧಿಸೂಚನೆಯಂತೆ ಸೆ. 29ರಿಂದ ಅ. 6ರವರೆಗೆ, ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರ ಕಚೇರಿಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಇದೇ ಸ್ಥಳದಲ್ಲಿ ನಾಮಪತ್ರದ ನಮೂನೆಗಳನ್ನು ಪಡೆಯಲು ಸಹ ಅವಕಾಶವಿದೆ.
ಅ. 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ. 9 ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಯೊಳಗಾಗಿ ಉಮೇದುವಾರರು ಅಥವಾ ಅವರ ಸೂಚಕರು ಲಿಖಿತವಾಗಿ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗೆ ನಾಮಪತ್ರ ಹಿಂಪಡೆಯುವ ಅರ್ಜಿಯನ್ನು ಸಲ್ಲಿಸಬೇಕು.
ಮತದಾನದ ಅವಶ್ಯಕತೆ ಇದ್ದಲ್ಲಿ ಅ.23ರಂದು ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.




