Kalaburagi | ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ನಾಗೇಂದ್ರ ಮಸೂತಿ ಅವರಿಗೆ ಅಧಿಕೃತ ಆಹ್ವಾನ

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಅ.28 ಮತ್ತು 29ರಂದು ನಡೆಯಲಿರುವ ಕಲಬುರಗಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ನಿವಾಸದಲ್ಲಿ ಸತ್ಕರಿಸಿ, ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಳೆದ ನಾಲ್ಕು ದಶಕಗಳಿಂದ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ಜೊತೆಜೊತೆಯಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಕಾರ್ಯವನ್ನು ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ಕನ್ನಡ ಸಾರಸ್ವತ ಲೋಕಕ್ಕೆ ಡಾ. ನಾಗೇಂದ್ರ ಮಸೂತಿ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ.ನಾಗೇಂದ್ರ ಮಸೂತಿ, ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅವರು ನಿತ್ಯನೂತನವಾಗಿ ಆಯೋಜಿಸುತ್ತಿರುವ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಎಂದಿಗೂ ಬರವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ತೇಗಲತಿಪ್ಪಿ ಹಾಗೂ ಅವರ ಬಳಗಕ್ಕೆ ಮತ್ತಷ್ಟು ಬಲ ತುಂಬಬೇಕಾಗಿದೆ. ವಿಶೇಷ ಹಾಗೂ ವೈವಿಧ್ಯಮಯ ಸಮ್ಮೇಳನಗಳ ಮೂಲಕ ತೆರೆಮರೆಯಲ್ಲಿರುವ ಪ್ರತಿಭಾವಂತ ಲೇಖಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಬಸವರಾಜ ಬಳೂಂಡಗಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಗಂಗೂ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ, ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಳ್ಳಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ವಿದ್ಯಾಸಾಗರ ದೇಶಮುಖ, ಶಿವಲೀಲಾ ಕಲಗುರ್ಕಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಮಹಾದೇವ ಬಡಾ, ಈರಣ್ಣ ಸೋನಾರ, ಪರಮಾನಂದ ಸರಸಂಬಿ, ಬಂಗಾರಪ್ಪ ಆಡಿನ್, ಮಹಾಲಿಂಗಯ್ಯ ಸ್ವಾಮಿ, ರಾಜೇಂದ್ರ ಮಾಡಬೂಳ, ಹಣಮಂತರಾವ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ, ಕುಪೇಂದ್ರ ಬರಗಾಲಿ, ಜ್ಯೋತಿ ಹಿರೇಮಠ, ಮಹಾನಂದಾ ಹುಲಿ, ವೆಂಕುಬಾಯಿ ರಜಪೂತ, ಪ್ರೊ. ಎಸ್.ಎಲ್. ಪಾಟೀಲ, ಶಿವಕುಮಾರ ಬಿದರಿ, ಮಲ್ಲಿನಾಥ ಸಂಗಶೆಟ್ಟಿ, ರೇವಯ್ಯ ಸ್ವಾಮಿ, ಜಯಶ್ರೀ ಜಮಾದಾರ, ಸಮರೀನ್ ಶೇಖ್, ಡಾ. ರೆಹಮಾನ್ ಪಟೇಲ್, ಬಾಬಾ ಫಕ್ರುದ್ದೀನ್, ಮಹ್ಮದ್ ಅಯಾಜೋದ್ದಿನ್ ಪಟೇಲ್, ಬಿ.ಎಂ. ಪಾಟೀಲ ಕಲ್ಲೂರ, ಪ್ರಭುಶೆಟ್ಟಿ ಮುದ್ದಾ, ಪದ್ಮಾವತಿ ನಾಯಕ್ ಹಾಗೂ ದಿನೇಶ ಮದಕರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






