ಕಲಬುರಗಿ | ಮಕ್ಕಳ ಹಕ್ಕು, ರಕ್ಷಣೆ ಕುರಿತು ಅಧಿಕಾರಿಗಳಿಗೆ ವಿಶೇಷ ಕಾಳಜಿ ಇರಲಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ : ಸರ್ಕಾರಿ ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳು ಹಾಗೂ ಮಕ್ಕಳಿಗೆ ಸೂಕ್ತ ಸಮಾಲೋಚನೆ ನೀಡುತ್ತಿರುವ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಪಿ.ಎಮ್.ಕೇರ್ಸ್. ಫಾರ್ ಚಿಲ್ಡ್ರನ್ ಯೋಜನೆಗಳ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
2025 ನೇ ಸಾಲಿನಲ್ಲಿ ಸರ್ಕಾರದ ಆದೇಶದಂತೆ ಜಾರಿಗೆ ಬಂದಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರುಗಳು ನಿಗಧಿತ ಸಮಯದಲ್ಲಿ ನಿಯಮಾನುಸಾರ ಮಕ್ಕಳ ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥಪಡಿಸಲು ತಿಳಿಸಿದರು.
ಪ್ರಾಯೋಜಕತ್ವ ಯೋಜನೆ ಅಡಿ ಬಂದಂತಹ ಅರ್ಜಿಗಳಿಗೆ ಸಂಬಂಧಿಸಿದಂತೆ ಮನೆ ಮನೆಗೆ ಭೇಟಿ ಮಾಡಿ ಸಾಮಾಜಿಕ ತನಿಖಾ ವರದಿಗಳನ್ನು ಮಾಡುವಂತೆ ತಿಳಿಸಿದರು.
ಪೋಕ್ಸೋ ಪ್ರಕರಣದಡಿ ದೂರು ದಾಖಲಾದ ಪ್ರಕರಣಗಳ ಸಂಬಂಧಪಟ್ಟಂತೆ ಪ್ರತಿಯೊಂದು ಪ್ರಕರಣದ ವಿವರಣೆಯನ್ನು ಹಾಗೂ ಯಾವ ಹಂತದಲ್ಲಿ ಇದೆ ಎನ್ನುವುದು ಕುರಿತಂತೆ ವರದಿ ನೀಡಲು ತಿಳಿಸಿದರು. ಮಕ್ಕಳ ಸಹಾಯವಾಣಿಗೆ ಬಂದಂತಹ ಕರೆಗಳ ಕುರಿತು ಕಳೆದ 5 ವರ್ಷಗಳ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ನೀಡಬೇಕು. ಒಳ್ಳೆ ಊಟ, ಸ್ವಚ್ಛತೆ ಕಾಯ್ದುಕೊಳ್ಳಬೇಕು. ಶಾಲೆಯಿಂದ ಹೊರಗೂಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪುನಃ ಮರಳಿ ಶಾಲೆಗೆ ಕರೆತರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಕೌಟುಂಬಿಕ ದೌರ್ಜನ್ಯ ಅತ್ಯಾಚಾರ, ಪೋಕ್ಸೋ, ಬಾಲ್ಯವಿವಾಹ, ನಾಪತ್ತೆ ಸೇರಿದಂತೆ ಇತರೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾರ್ಯನಿರ್ವಹಿಸಬೇಕು. ಬಾಲ್ಯ ವಿವಾಹ ತಡೆಯಲು ಎಲ್ಲ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ಬಾಲಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದರೆ ಅಧಿಕಾರಿಗಳ ತಂಡಗಳನ್ನು ರಚಿಸಿ ಹೊಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಸೇರಿದಂತೆ ಇಟ್ಟಿಂಗಿ ಭಟ್ಟಿಗಳಲ್ಲಿ ಕಾಲ-ಕಾಲಕ್ಕೆ ಪರಿಶೀಲನೆ ಮಾಡಬೇಕು ಹಾಗೂ ಅಂತಹ ಮಕ್ಕಳು ಕಂಡು ಬಂದಲ್ಲಿ ಸಂಬಂಧಿಸಿದ ಮಾಲಕರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ, ಡಿ.ಹೆಚ್.ಓ. ಡಾ.ಶರಣಬಸಪ್ಪ ಕ್ಯಾತನಾಳ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೆ, ಕಾರ್ಮಿಕ ಇಲಾಖೆಯ ಅಧಿಕಾರಿ ಶರಣಪ್ಪ ಹಳಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ್, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಜಿಲ್ಲಾಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೋಲಿಸ್ ನಿರೀಕ್ಷಕರು ಪೋಲಿಸ್ ಠಾಣೆ ಕಲಬುರಗಿ ನಗರ ಮತ್ತು ಸರ್ಕಾರೇತರ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.







