ಕಲಬುರಗಿ | ಫೆ.8ರಂದು ಜಿಲ್ಲಾ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನ
ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಸಿ.ಪಾಟೀಲ್ ಆಯ್ಕೆ

ಡಾ.ಎಸ್.ಸಿ.ಪಾಟೀಲ್, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ
ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.8 ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಜಿಲ್ಲಾ ಮಟ್ಟದ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಚಿತ್ರಕಲಾವಿದ ಡಾ.ಎಸ್.ಸಿ.ಪಾಟೀಲ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಇತ್ತಿಚೆಗೆ ನಡೆದ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸ್ವಾಗತ ಸಮಿತಿ ರಚನೆ ಸೇರಿದಂತೆ ಇನ್ನುಳಿದ ಸಮ್ಮೇಳನದ ರೂಪುರೇಷೆಗಳನ್ನು ಸಿದ್ಧಪಡಿಸಲು ಈಗಾಗಲೇ ಸಿದ್ಧತೆ ನಡೆದಿದೆ ಎಂದು ಅವರು ವಿವರಿಸಿದರು.
ಜಾನಪದ ಜಗತ್ತು, ಅಲ್ಲಿನ ಸೊಗಡು, ಸಹಜತೆಯನ್ನು ಹೆಚ್ಚು ಆಪ್ತವಾಗಿಸಿಕೊಳ್ಳುವ ಡಾ.ಎಸ್.ಸಿ.ಪಾಟೀಲ್ ರ ವ್ಯಕ್ತಿತ್ವ ಅವರ ರೇಖೆಗಳಲ್ಲೂ ವ್ಯಕ್ತವಾಗಿದೆ.
ಹೊಸ ಆಲೋಚನೆಗಳು, ವಿಭಿನ್ನ ಪ್ರಯೋಗದೊಂದಿಗೆ ಪರಿಷತ್ತು ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಡೆಸಲಾಗುತ್ತಿದೆ. ಪರಿಷತ್ತಿನ ಇತಿಹಾಸದಲ್ಲಿ ಈ ದೃಶ್ಯಕಲಾ ಸಾಹಿತ್ಯ ಸಮ್ಮೇಳನ ಮೊದಲನೆಯದಾಗಿದೆ. ಇಂಥ ಅನೇಕ ವಿಶೇಷ ಸಮ್ಮೇಳನಗಳಿಗೆ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೆಸರುವಾಸಿಯಾಗಿದೆ. ಈ ಜಿಲ್ಲೆಯ ಜನರ ಸಹಕಾರದಿಂದಲೇ ಈ ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷರ ಪರಿಚಯ :
ಕರ್ನಾಟಕದ ದೃಶ್ಯಕಲಾ ವಲಯದಲ್ಲಿ ದೃಶ್ಯಕಲಾ ಶಿಕ್ಷಣ ತಜ್ಞರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ, ಕಲೆಯಲ್ಲಿ ತಮ್ಮನ್ನು ಪಳಗಿಸಿಕೊಂಡು ಯುವ ಜನತೆಗೂ ಮಾರ್ಗದರ್ಶನ ನೀಡುವವರಲ್ಲಿ ಡಾ.ಎಸ್.ಸಿ.ಪಾಟೀಲ್ ಅವರ ಹೆಸರು ದೊಡ್ಡದು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದೃಶ್ಯಕಲಾ ವಿಭಾಗದ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಡೀನ್ ಆಗಿ, ಕರ್ನಾಟಕದ ಲಲಿತಕಲಾ ವಿಶ್ವವಿದ್ಯಾಲಯದ ಪ್ರಪ್ರಥಮ ಆಡಳಿತಾಧಿಕಾರಿ ಸೇವೆ ಸಲ್ಲಿಸಿದ್ದಾರೆ.
ಸುಮಾರು 60 ಕ್ಕೂ ಹೆಚ್ಚು ದೃಶ್ಯಕಲಾ ಸಾಹಿತ್ಯ ಪುಸ್ತಕ, ಸುಮಾರು 300 ಕ್ಕೂ ಹೆಚ್ಚು ದೃಶ್ಯಕಲಾ ಸಂಬಂಧಿತ ಬಿಡಿ ಲೇಖನಗಳನ್ನು ಪ್ರಕಟಿಸಿ ಕಲಾ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯಗೌರವ, ಕು.ಶಿ.ಹರಿದಾಸ ಭಟ್ಟ ಜನಪದ ಪ್ರಶಸ್ತಿ, ನವದೆಹಲಿಯ ಶಿಕ್ಷಣ ರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಶ್ರೇಷ್ಟ ಉಪನ್ಯಾಸಕ ಪ್ರಶಸ್ತಿ, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಹಂಡೆ ಶ್ರೀ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಮಾನಶಿವಣಗಿ ಗ್ರಾಮದಲ್ಲಿ 23ನೇ ಜುಲೈ 1955 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮೂರಿನಲ್ಲಿಯೇ ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ಧಾರವಾಡದ ಶ್ರೀ ಮುರುಘಾಮಠದ ಆಶ್ರಯ ಪಡೆದು ಅಲ್ಲಿಯೇ ಬಿ.ಎ. ಪದವಿಯನ್ನು ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸಾಹಿತ್ಯ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದಿರುತ್ತಾರೆ. ಮುಂದೆ ಫೈನ್ ಆರ್ಟ್ನಲ್ಲೂ ಅನೇಕ ಉನ್ನತ ಮಟ್ಟದ ಪದವಿಯನ್ನು ಪಡೆದುಕೊಂಡು ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡು, ಕನ್ನಡ ಸಾಹಿತ್ಯದ ಜತೆಗೆ ಕಲೆಯ ನಂಟನ್ನೂ ಅಂಟಿಸಿಕೊoಡುಈ ಎರಡೂ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕಲೆ ಎಂಬುದು ಮನುಷ್ಯನ ಅಭಿವ್ಯಕ್ತಿಗೆ ಇರುವ ಒಳ್ಳೆಯ ಸಾಧನ. ಕಲೆಯ ಮೂಲಕ ಮನಸ್ಸಿನ ತುಡಿತವನ್ನು ಜನರಿಗೆ ತಿಳಿಸಬಹುದು. ಕಲೆ ಮಾನವನ ಬದುಕಿಗೆ ಪೂರಕವಾಗುವುದರ ಜತೆಗೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿದೆ. ಕಲಾವಿರದ ಸಂಗಮವೇ ಈ ದೃಶ್ಯಕಲಾ ಸಾಹಿತ್ಯ ಸಮ್ಮೇಳನ.
ವಿಜಯಕುಮಾರ ಪಾಟೀಲ ತೇಗಲತಿಪ್ಪಿ, (ಕಸಾಪ ಜಿಲ್ಲಾಧ್ಯಕ್ಷ, ಕಲಬುರಗಿ)
ಪ್ರೊ.ಎಸ್.ಸಿ.ಪಾಟೀಲ್ ಅವರು ತಮ್ಮ ಜೀವನದಲ್ಲಿ ಕಲೆ, ಸಂಸ್ಕೃತಿಗಳು ಹಾಸುಹೊಕ್ಕಾಗಿಸಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ಕನ್ನಡ ನಾಡಿನ ದೃಶ್ಯಕಲಾ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಇವರನ್ನು ಪರಿಷತ್ತಿನ ಅಡಿಯಲ್ಲಿ ನಡೆಯುತ್ತಿರುವ ದೃಶ್ಯಕಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇಡೀ ಚಿತ್ರಕಲಾ ಸಮೂಹಕ್ಕೆ ವಿಶೇಷ ದೌರವ ಕೊಟ್ಟಂತಾಗಿದೆ.
-ಡಾ. ರೆಹಮಾನ್ ಪಟೇಲ್, (ಚಿತ್ರಕಲಾವಿದ ಹಾಗೂ ಸಂಶೋಧಕ)







