Kalaburagi | ಜು.25ರಂದು ಬಸವ ಮಾರ್ಗ ಪ್ರಶಸ್ತಿ ಪ್ರದಾನ, ‘ಅಪ್ಪನ ಒಡನಾಟ’ ಗ್ರಂಥ ಲೋಕಾರ್ಪಣೆ

ಕಲಬುರಗಿ: ಶರಣ ಸಾಹಿತಿ ಲಿಂ. ಲಿಂಗಣ್ಣ ಸತ್ಯಂಪೇಟೆಯವರ 14ನೇ ಸ್ಮರಣೋತ್ಸವ ಅಂಗವಾಗಿ ಬಸವ ಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ‘ಅಪ್ಪನ ಒಡನಾಟ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಮಾರ್ಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಮುದಗಲ್ ಕಲ್ಯಾಣಾಶ್ರಮದ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಉದ್ಘಾಟಿಸಲಿದ್ದಾರೆ.
ವಕೀಲ ಸಂತೋಷ ಸತ್ಯಂಪೇಟೆ ರಚಿಸಿರುವ ‘ಅಪ್ಪನ ಒಡನಾಟ’ ಕೃತಿಯನ್ನು ಶಾಸಕ ಬಿ.ಆರ್. ಪಾಟೀಲ ಲೋಕಾರ್ಪಣೆ ಮಾಡಲಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ. ಅಶೋಕ ದೊಡ್ಡಮನಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ. ಬಿ.ಎಸ್. ಸುಧಾಕರ ಅವರಿಗೆ ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ಬಸವ ಮಾರ್ಗ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5,000 ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ, ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್, ಕರ್ನಾಟಕ ರಾಜ್ಯ ವೈಜ್ಞಾನಿಕ ಹಾಗೂ ಸಂಶೋಧನಾ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಭಾಗವಹಿಸಲಿದ್ದಾರೆ.
ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದ್ದಾರೆ.






