Kalaburagi | ರೇಬಿಸ್ ಮುಕ್ತ ಸಮಾಜ ನಿರ್ಮಾಣಕ್ಕೆ ‘ಒನ್ ಹೆಲ್ತ್’ ಪರಿಕಲ್ಪನೆ ಅಗತ್ಯ: ರಾಹುಲ್ ಸಂಕನೂರ
ʼವಿಶ್ವ ರೇಬಿಸ್ ದಿನಾಚರಣೆ–2026ʼ

ಕಲಬುರಗಿ: ಮಾನವ, ಪ್ರಾಣಿ-ಪಕ್ಷಿ ಹಾಗೂ ಪರಿಸರದ ಆರೋಗ್ಯ ಪರಸ್ಪರ ಬೆಸೆದುಕೊಂಡಿದ್ದು, ಎಲ್ಲದರ ಆರೋಗ್ಯವನ್ನು ಸಮಗ್ರವಾಗಿ ಪರಿಗಣಿಸುವ ‘ಒನ್ ಹೆಲ್ತ್’ ಪರಿಕಲ್ಪನೆಯ ಮೂಲಕ ರೇಬಿಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್. ಸಂಕನೂರ ಹೇಳಿದರು.
ನಗರದ ಹೊಸ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘದ ಕಲಬುರಗಿ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರೇಬಿಸ್ ದಿನಾಚರಣೆ–2026 ಅಂಗವಾಗಿ ಜಿಲ್ಲೆಯ ಪಶುವೈದ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತಾಂತ್ರಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವರು, ಪ್ರಾಣಿ-ಪಕ್ಷಿಗಳು ಹಾಗೂ ಪರಿಸರದ ಆರೋಗ್ಯ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಒಂದರಲ್ಲಿ ಏರುಪೇರಾದರೂ ಅದರ ಪರಿಣಾಮ ಇಡೀ ಪರಿಸರದ ಸಮತೋಲನದ ಮೇಲೆ ಬೀರುತ್ತದೆ. ಪ್ರಕೃತಿ ಮತ್ತು ಪ್ರಾಣಿಗಳು ಆರೋಗ್ಯವಾಗಿದ್ದಾಗ ಮಾತ್ರ ಮಾನವ ಸಮಾಜವೂ ಸುರಕ್ಷಿತವಾಗಿರಲು ಸಾಧ್ಯ ಎಂದು ತಿಳಿಸಿದರು.
ರೇಬಿಸ್ ಲಸಿಕೆಯನ್ನು ಸಂಶೋಧಿಸಿದ ವಿಜ್ಞಾನಿ ಲೂಯಿ ಪಾಶ್ಚರ್ ಅವರ ಸ್ಮರಣಾರ್ಥ ವಿಶ್ವ ರೇಬಿಸ್ ದಿನ ಆಚರಿಸಲಾಗುತ್ತದೆ. ರೇಬಿಸ್ ಶೇ.100ರಷ್ಟು ಮಾರಕ ರೋಗವಾದರೂ, ಶೇ.100ರಷ್ಟು ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ನಾಯಿ, ಬೆಕ್ಕು ಸೇರಿದಂತೆ ಸೋಂಕಿತ ಪ್ರಾಣಿಗಳ ಕಚ್ಚುವಿಕೆಯಿಂದ ರೋಗ ಹರಡಬಹುದಾಗಿದ್ದು, ಸಮಯಕ್ಕೆ ಸರಿಯಾಗಿ ಆಂಟಿ-ರೇಬಿಸ್ ಲಸಿಕೆ ಪಡೆಯುವುದರಿಂದ ಜೀವ ಉಳಿಸಬಹುದು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೇಬಿಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿವಿಧ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ರೇಬಿಸ್ ಮುಕ್ತ ವಾತಾವರಣ ನಿರ್ಮಿಸಲು ನಿರಂತರ ಪ್ರಯತ್ನ ಅಗತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಡಾ. ಸಂಜಯ ರೆಡ್ಡಿ ಮಾತನಾಡಿ, ಮಾನವ–ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ರೇಬಿಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಲಬುರಗಿಯಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ದೊಡ್ಡ ಪ್ರಮಾಣದ ಎಬಿಸಿ (Animal Birth Control) ಕೇಂದ್ರ ಆರಂಭಿಸುವ ಕಾರ್ಯ ನಡೆಯುತ್ತಿದೆ. ಪಶುವೈದ್ಯರ ಕೊರತೆ ನೀಗಿಸಲು ‘ಪೇಡ್ ಸರ್ವಿಸ್’ ಮಾದರಿಯಲ್ಲಿ ವೈದ್ಯರ ಸೇವೆ ಬಳಸಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಲಬುರಗಿ ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ದಯಾನಂದ ಹಕ್ಕಪಿಕ್ಕಿ ಮಾತನಾಡಿ, ರೇಬಿಸ್ ಮುಕ್ತ ವಾತಾವರಣ ನಿರ್ಮಿಸಲು ಪಶುಸಂಗೋಪನೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಬೆಂಗಳೂರು ಮೂಲದ CARE ಸಂಸ್ಥೆ ಪ್ರತಿದಿನ 20ರಿಂದ 30 ಶ್ವಾನಗಳಿಗೆ ಎಬಿಸಿ ಹಾಗೂ ರೇಬಿಸ್ ಲಸಿಕೆ ಕಾರ್ಯಕ್ರಮ ನಡೆಸುತ್ತಿರುವುದನ್ನು ಅವರು ಶ್ಲಾಘಿಸಿದರು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬೀದಿ ನಾಯಿಗಳ ನಿಯಂತ್ರಣ ಹಾಗೂ ರೇಬಿಸ್ ತಡೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಕರ್ನಾಟಕ ಪಶುವೈದ್ಯಕೀಯ ಸಂಘದ ಕಲಬುರಗಿ ಘಟಕದ ಅಧ್ಯಕ್ಷ ಡಾ. ಯಲ್ಲಪ್ಪ ಇಂಗಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದರೂ ಪಶುಪಾಲನಾ ಇಲಾಖೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಕಳೆದ 15 ದಿನಗಳಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳು ಹಾಗೂ ಚಿತ್ತಾಪುರ, ಚಿಂಚೋಳಿ, ಸೇಡಂ, ಆಳಂದ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ 480ಕ್ಕೂ ಹೆಚ್ಚು ರೇಬಿಸ್ ಜಾಗೃತಿ ಕಾರ್ಯಕ್ರಮಗಳು ನಡೆದಿವೆ. 2030ರ ವೇಳೆಗೆ ರೇಬಿಸ್ ಮುಕ್ತ ಸಮಾಜ ನಿರ್ಮಿಸುವ ಗುರಿಯೊಂದಿಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಅಭಿಯಾನ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.
ಕಲಬುರಗಿ ಇಎಸ್‌ಐಸಿ ಸಹ ಪ್ರಾಧ್ಯಾಪಕ ಡಾ. ಮಾವತ್ಕರ್ ಮುನ್ನಾಜೀ ವೆಂಕಟೇಶ ಹಾಗೂ ಬೀದರ್ ಕೆವಿಎಎಫ್‌ಎಸ್‌ಯು ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಸಂಜೀವಕುಮಾರ ಟೋಪನ್ ಅವರು ರೇಬಿಸ್ ನಿಯಂತ್ರಣ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ರೇಬಿಸ್ ಜಾಗೃತಿ ಮ್ಯಾರಥಾನ್ ಮತ್ತು ಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಸಂಗನಗೌಡ ಹೊಸಳ್ಳಿ, ಡಿಎಚ್‌ಒ ಶರಣಬಸಪ್ಪ ಕ್ಯಾತನಾಳ, ಕಲಬುರಗಿ ಸ್ಪೆಷಾಲಿಟಿ ಆಸ್ಪತ್ರೆಯ ಉಪನಿರ್ದೇಶಕ ಡಾ. ರಾಜು ದೇಶಮುಖ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಡಾ. ರವೀಂದ್ರ ಬುರೆ ಸೇರಿದಂತೆ ಜಿಲ್ಲೆಯ ಪಶುವೈದ್ಯಾಧಿಕಾರಿಗಳು ಹಾಗೂ ನಿವೃತ್ತ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಡಾ.ಶಂಕರ ಎಸ್.ಕಣ್ಣಿ ಸ್ವಾಗತಿಸಿದರು. ಡಾ.ವಿಜಯಕುಮಾರ ವಂದಿಸಿದರು.






