Kalaburagi | ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಕಲಬುರಗಿ: ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ವತಿಯಿಂದ ಪ್ರಥಮ ವರ್ಷದ ಮೂರು ಮತ್ತು ಐದು ವರ್ಷಗಳ ಬಿ.ಎ. ಎಲ್ಎಲ್.ಬಿ. ಕೋರ್ಸ್ಗಳ ನೂತನ ವಿದ್ಯಾರ್ಥಿಗಳಿಗಾಗಿ ಶನಿವಾರ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸುರನ್ ವಹಿಸಿದ್ದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥ ಡಾ. ಅನಂತ ಡಿ. ಚಿಂಚುರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕಾನೂನು ಶಿಕ್ಷಣದ ಮಹತ್ವ, ನೈತಿಕ ಮೌಲ್ಯಗಳು ಹಾಗೂ ವಕೀಲ ವೃತ್ತಿಯ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಎಂಎಸ್ಐ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ನರೇಂದ್ರ ಬಡಶೇಷಿ ಗೌರವಾನ್ವಿತ ಅತಿಥಿಯಾಗಿ ಹಾಗೂ ಸೊಸೈಟಿಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ್ ಶೀಲವಂತ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ತಿಪ್ಪೇಸ್ವಾಮಿ ಎಸ್., ಐಕ್ಯೂಎಸಿ ಸಂಯೋಜಕಿ ಡಾ. ಅಪರ್ಣಾ ಜೆ. ಶಿಂಧೆ, ಲೀಗಲ್ ಏಡ್ ಸೆಲ್ ಸಂಯೋಜಕ ಡಾ. ಎಸ್. ಚಂದ್ರಶೇಖರ್, ವಿದ್ಯಾರ್ಥಿ ಕಲ್ಯಾಣ ಕೋಶದ ನಿರ್ದೇಶಕ ಮಹಾಂತೇಶ ಬಿ., ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಜಿ. ಜವಳಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಓರಿಯಂಟೇಶನ್ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಾವಳಿ, ಪಠ್ಯಕ್ರಮ, ಗ್ರಂಥಾಲಯ, ಮೂಟ್ ಕೋರ್ಟ್, ಲೀಗಲ್ ಏಡ್ ಸೆಲ್, ಎನ್ಎಸ್ಎಸ್ ಹಾಗೂ ವಿದ್ಯಾರ್ಥಿ ಕಲ್ಯಾಣ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳೊಂದಿಗೆ ಪಾಲಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾನೂನು ಕ್ಷೇತ್ರದಲ್ಲಿ ಉತ್ತಮ ಜ್ಞಾನ ಸಂಪಾದಿಸುವುದರೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಅತಿಥಿಗಳು ಶುಭ ಹಾರೈಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.






