Kalaburagi | ಮೊರಾರ್ಜಿ ವಸತಿ ನಿಲಯದಲ್ಲಿ ಊಟ ಸೇವಿಸಿದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಕಲಬುರಗಿ : ವಸತಿ ನಿಲಯದಲ್ಲಿ ಆಹಾರ ಸೇವಿಸಿದ ಬಳಿಕ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಗುರುವಾರ ಸಂಜೆ ನಡೆದಿದೆ.
ವಸತಿ ನಿಲಯದ 6ರಿಂದ 10ನೇ ತರಗತಿ ವಿದ್ಯಾರ್ಥಿಗಳು ಅನ್ನ-ಸಾಂಬಾರ್ ಸೇವಿಸಿದ ಕೆಲವೇ ಹೊತ್ತಿನಲ್ಲಿ ವಾಂತಿ ಹಾಗೂ ಅಸ್ವಸ್ಥತೆಯಿಂದ ಬಳಲಲು ಆರಂಭಿಸಿದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಕಲುಷಿತ ಟ್ಯಾಂಕರ್ ನೀರಿನ ಬಳಕೆ ಅಥವಾ ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಆದರೆ ನಿಖರ ಕಾರಣ ವೈದ್ಯಕೀಯ ಪರೀಕ್ಷೆ ಹಾಗೂ ಆಹಾರ ಮತ್ತು ನೀರಿನ ಮಾದರಿಗಳ ಪರೀಕ್ಷೆಯ ಬಳಿಕವೇ ತಿಳಿಯಲಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ವಸತಿ ನಿಲಯ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗಮೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ.






