Kalaburagi | ಆ.29ರಂದು ಪಿಡಿಎ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭ
729 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ; 35 ಚಿನ್ನದ ಪದಕ ವಿತರಣೆ : ಶಶೀಲ್ ನಮೋಶಿ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಪಿಡಿಎ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭವು ಆ.29ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪಿಡಿಎ ಕಾಲೇಜಿನ ಸಭಾಂಗಣದಲ್ಲಿರುವ ಆಡಿಟೋರಿಯಂನಲ್ಲಿ ನಡೆಯಲಿದೆ. ಈ ಬಾರಿ 690 ಯುಜಿ ಹಾಗೂ 39 ಸ್ನಾತಕೋತ್ತರ (ಪಿಜಿ) ಸೇರಿದಂತೆ ಒಟ್ಟು 729 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ತಿಳಿಸಿದರು.
ನಗರದ ಪಿಡಿಎ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಗೌರವ ಉಪಸ್ಥಿತರಾಗಿ ಪದವೀಧರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಳಿನಿ ಅತುಲ್ ಮುಖ್ಯ ಅತಿಥಿಗಳಾಗಿ ಹಾಗೂ ಬೆಂಗಳೂರಿನ ಸಮ್ಮಿತ್ ಕನ್ಸಲ್ಟಿಂಗ್ ಸಂಸ್ಥೆಯ ಮುಖ್ಯಸ್ಥ ಮತ್ತು ಪಿಡಿಎ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂದೀಪ್ ಶರ್ಮಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ ನಮೋಶಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಎಸ್. ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ ಬಿ. ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಅಬ್ದಲ್ಲಾ ದಾನೀಶ್‌ಗೆ 7 ಚಿನ್ನದ ಪದಕ :
2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪೈಕಿ ಅತ್ಯಧಿಕ ಗ್ರೇಡ್ ಪಾಯಿಂಟ್ ಗಳಿಸಿದ 19 ವಿದ್ಯಾರ್ಥಿಗಳಿಗೆ ಒಟ್ಟು 35 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ಕಂಪ್ಯೂಟರ್ ಸೈನ್ಸ್ ವಿಭಾಗದ ಅಬ್ದಲ್ಲಾ ದಾನೀಶ್ ಅವರು ಅತ್ಯುತ್ತಮ ಸಾಧನೆ ಮಾಡಿ ಏಳು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ‘ಚಿನ್ನದ ಹುಡುಗ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಜ್ವಲ್ ಜಿ. ಶಾಸ್ತ್ರಿ ಅವರು ಆರು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದಿದ್ದಾರೆ ಎಂದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಭಿಷೇಕ್, ಎಲೆಕ್ಟ್ರಾನಿಕ್ಸ್ ವಿಭಾಗದ ತಲ್ಲಾ ಸುಫಿಯಾನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ತಲ್ಲಾ ಅಮನ್ ಅಲಿ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಸಾಗರ್ ತಲಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವಿಧ ವಿಭಾಗಗಳ ಇತರ 11 ವಿದ್ಯಾರ್ಥಿಗಳಿಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಇಬ್ಬರು ವಿದ್ಯಾರ್ಥಿಗಳ ನಡುವೆ ಹಂಚಲಾಗುವುದು ಎಂದು ತಿಳಿಸಿದರು.
ಎಐ-ಎಂಎಲ್ ವಿದ್ಯಾರ್ಥಿಗೂ ಚಿನ್ನದ ಪದಕ :
ನೂತನವಾಗಿ ಆರಂಭಿಸಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗದಲ್ಲಿ ಅತ್ಯಧಿಕ ಗ್ರೇಡ್ ಗಳಿಸುವ ವಿದ್ಯಾರ್ಥಿಗೆ ಹರಿಯಾಣ ಮೂಲದ ಉದ್ಯಮಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಇರಾ ಅಗರ್‌ವಾಲ್ ಅವರು ಚಿನ್ನದ ಪದಕವನ್ನು ಪ್ರಾಯೋಜಿಸುತ್ತಿದ್ದಾರೆ. ಇದೇ ರೀತಿ ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ವಿಭಾಗದ ವಿದ್ಯಾರ್ಥಿಗೆ ಕಾಲೇಜಿನ ವತಿಯಿಂದ ಚಿನ್ನದ ಪದಕವನ್ನು ಪ್ರಾಯೋಜಿಸಲಾಗಿದೆ.
ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಈಗಾಗಲೇ 450ಕ್ಕೂ ಹೆಚ್ಚು ಪದವೀಧರರು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶಶೀಲ ನಮೋಶಿ ಹೇಳಿದರು.
ಪಿಡಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸಮ್ಮಿತ್ ಕನ್ಸಲ್ಟಿಂಗ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಉದಯ ಚಿಂಚೋಳಿ, ಶರಣಬಸಪ್ಪ ಹರವಾಳ, ಅನಿಲ್ ಪಟ್ಟಣ, ಸಂಪತ್ ಲೋಯಾ, ಪ್ರಾಚಾರ್ಯ ಎಸ್.ಆರ್. ಪಾಟೀಲ್, ಎಸ್.ಆರ್. ಹೊಟ್ಟಿ, ಭಾರತಿ ಹರಸೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






