ಕಲಬುರಗಿ | ಸ್ನೇಹ, ಸಹಕಾರದಿಂದ ಶಾಂತಿ ನೆಲೆಸಲು ಸಾಧ್ಯ : ರೆ.ಲಿಯೋಪೊಲ್ಡೋ ಜರೆಲ್ಲಿ

ಕಲಬುರಗಿ: ಜಗತ್ತಿಗೆ ಶಾಂತಿ ಅತ್ಯಂತ ಅವಶ್ಯಕವಾಗಿದೆ ಅದನ್ನು ನೆಲೆಯೂರಲು ನಾವೆಲ್ಲರೂ ಶ್ರಮಿಸಬೇಕು. ಧಾರ್ಮಿಕ ವಿದ್ವಾಂಸರು ಯುವ ಜನತೆಗೆ ಸ್ನೇಹ ಸಹಕಾರದ ಮನೋಭಾವನೆಗಳನ್ನು ಬೆಳೆಸುವುದು ಸರ್ವಧರ್ಮದ ನಾಯಕರ ಜವಾಬ್ದಾರಿಯಾಗಿದೆ ಎಂದು ಕ್ರೈಸ್ತರ ವಿಶ್ವಗುರುಗಳ ಭಾರತ ಮತ್ತು ನೇಪಾಳದ ರಾಯಭಾರಿಗಳಾದ ರೆ.ಲಿಯೋಪೊಲ್ಡೋ ಜರೆಲ್ಲಿ ಹೇಳಿದ್ದಾರೆ.
ರವಿವಾರ ಮದರ ತೆರೆಸಾ ಕ್ಯಾಥಡ್ರಲನ ಚರ್ಚ್ ಸಭಾಂಗಣದಲ್ಲಿ ನಡೆದ ಸರ್ವಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವ ಬೆಳೆಯಲು ಯುವಜನರಿಗೆ ಧಾರ್ಮಿಕ ಹಿರಿತನದೊಂದಿಗೆ ಸ್ನೇಹ, ಸಹಕಾರ ಮತ್ತು ಪರಸ್ಪರ ಬಾಂಧವ್ಯ ವೃದ್ಧಿಗೆ ಒತ್ತು ಕೊಡುವ ಮೌಲ್ಯಗಳನ್ನು ಮೈಗುಡಿಸಿಕೊಳ್ಳುವ ರೀತಿಯಲ್ಲಿ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷೆತ ವಹಿಸಿ ಮಾತನಾಡಿದ ಕಲಬುರಗಿಯ ಬಿಷಪ್ ಗುರುಗಳಾದ ರಾಬರ್ಟ್ ಮೈಕಲ್ ಮಿರಾಂಡ, ದೇವರ ಅನುಭವವನ್ನು ಶಿಕ್ಷಣ ಆರೊಗ್ಯ ಮತ್ತು ಕೌಶಲ್ಯಗಳ ಅಭಿವೃದ್ಧಿಯಂತಹ ಸೇವೆಯಲ್ಲಿ ಕಾಯುತ್ತೇವೆ. ಸರ್ವಧರ್ಮದ ಸಾರ್ಥಕತೆ, ಐಕ್ಯತೆ ಮತ್ತು ಭರವಸೆಗಳಲ್ಲಿ ಕಾಣಬೇಕಾಗಿದೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಸೇಂಟ್ ಮೇರಿ ಶಾಲೆಯ ಮಕ್ಕಳಿಂದ ಏಕತೆ ಸಾರುವ ನೃತ್ಯ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಮುಸ್ಲಿಂ ಸಮುದಾಯದ ಮುಖಂಡರು ವೇದಿಕೆ ಮೇಲಿದ್ದರು.
ಫಾದರ್ ಸ್ಟ್ಯಾನಿ ಲೊಬೊ ಸ್ವಾಗತಿಸಿದರು. ಫಾದರ್ ವಿನ್ಸ್ಂತ ಪೆರಿರಾ ಕಾರ್ಯಕ್ರಮವನ್ನು ನಿರೂಪಿಸಿದರು. ಫಾದರ್ ಪ್ರವೀಣ ಜೋಸೆಫ್ ವಂದಿಸಿದರು.







