ಕಲಬುರಗಿ | ಶಹಾಬಾದ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪೀರಮ್ಮ ಪಗಲಾಪೂರ ಅವಿರೋಧ ಆಯ್ಕೆ

ಕಲಬುರಗಿ : ಶಹಾಬಾದ್ ನಗರದ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಈ ವೇಳೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪೀರಮ್ಮ ಪಗಲಾಪೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರಸಭೆಯ ಸದಸ್ಯ ರವಿ ರಾಠೋಡ ಮಾತನಾಡಿ, ಈಗಾಗಲೇ ಹಲವು ಬಾರಿ ನೀರಿನ ಬಿಲ್ ಜತೆ ಬಡ್ಡಿ ಸಮೇತ ಬರುತ್ತಿದ್ದು, ಬಡಜನರಿಗೆ ಹೊರೆಯಾಗುತ್ತಿದೆ. ಕೂಡಲೇ ನೀರಿನ ಬಿಲ್ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಅದಕ್ಕೆ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದರಲ್ಲದೇ ಯಾರಿಗೆ ಬಿಪಿಎಲ್ ಕಾರ್ಡ್ ಇವೆ, ಅಂತಹವರ ಬಡ್ಡಿ ಮನ್ನಾ ಮಾಡಿ ಎಂದು ತಿಳಿಸಿದರು.
ನಗರಸಭೆಯ ಸದಸ್ಯ ನಾಗರಾಜ ಕರಣಿಕ್ ಮಾತನಾಡಿ, ನಗರಸಭೆಯ ವ್ಯಾಪ್ತಿಯ ರಮಣಾದೇವಿ ಮಂದಿರದ ಹತ್ತಿರ ಹಾಗೂ ರಾಮಘಡ ಬಡಾವಣೆಯ ಸಮೀಪ ನಡೆಯುತ್ತಿರುವ ಜಿಪ್ಲಸ್ 1 ಮನೆ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಗಳು ಗಮನ ನೀಡುತ್ತಿಲ್ಲ. ಕೂಡಲೇ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿ, ಕಾಮಗಾರಿ ನಿಲ್ಲಿಸಿ ಎಂದು ಹೇಳಿದರು.
ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ನಗರದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ.ಬೀದಿನಾಯಿಗಳು ಸಾಕಷ್ಟು ಜನರಿಗೆ ಕಚ್ಚುತ್ತಿವೆ. ಗಾಯಾಳುಗಳಾದ ಜನರಿಗೆ ಪರಿಹಾರ ಒದಗಿಸಬೇಕು. ಅಲ್ಲದೇ ಬಡಾವಣೆಗಳಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಒಂದು ಕಡೆ ಬಲ್ಬ್ ಗಳು ನೀಡಿದರೇ, ಇನ್ನೊಂದು ವಾರ್ಡದವರಿಗೆ ನೀಡುತ್ತಿಲ್ಲ ಬೀದಿ ದೀಪಗಳ ನಿರ್ವಹಣೆ ಮಾಡಿ. ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಹೇಳಿದರು.
ನಾಯಿ ಕಚ್ಚಿಸಿಕೊಂಡು ಗಾಯಾಳುಗಳು ಸರಕಾರಿ ವೈದ್ಯರಿಂದ ಪ್ರಮಾಣ ಪತ್ರ ತೆಗೆದುಕೊಂಡು ಬಂದರೆ ಅವರಿಗೆ 5 ಸಾವಿರ ರೂ. ಪರಿಹಾರ ಚೆಕ್ ನೀಡಲಾಗುವುದೆಂದು ಪೌರಾಯುಕ್ತರು ತಿಳಿಸಿದರು.
ಉಪಾಧ್ಯಕ್ಷೆ ಫಾತಿಮಾ ಬಾಕ್ರೋದ್ದಿನ್, ಎಇಇ ಶರಣು ಪೂಜಾರ, ನಗರಸಭೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ :
ಸಾಮನ್ಯ ಸಭೆಯ ಪ್ರಾರಂಭವಾಗುವ ಮುಂಚೆ ಜೆಡಿಎಸ್ ಅಧ್ಯಕ್ಷ ಸಾಬೀರ ಬಾರಿ ನೂರಾರು ಸಾರ್ವಜನಿಕರೊಂದಿಗೆ ನಗರಸಭೆಯ ಆವರಣದೊಳಗೆ ನಾಯಿ ಕಚ್ಚಿದ ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ಸಾಮನ್ಯ ಸಭೆಯಲ್ಲಿ ನಗರಸಭೆಯ ಸದಸ್ಯರನ್ನು ಹೋಗಲು ತಡೆಯೊಡ್ಡಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸುಮಾರು 60 ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದಾರೆ. ಅತಿ ಕಡು ಬಡತನದ ಕುಟುಂಬದ ಮಗುವಿಗೆ ಕಚ್ಚಿದ್ದರಿಂದ ಆಸ್ಪತ್ರೆ ಖರ್ಚು ಭರಿಸಲು ಸಾಧ್ಯವಿಲ್ಲದಿದ್ದಾಗ, ನಗರಸಭೆ ವತಿಯಿಂದ ಆಸ್ಪತ್ರೆ ಬಿಲ್ ಪಾವತಿಸಿದರೆ ನೀಡಲಾಗುವುದೆಂದು ಹೇಳಿದ್ದರು.
ಆದರೆ ಸಲ್ಲಿಸಿ ತಿಂಗಳುಗಳೇ ಗತಿಸಿದರೂ ಅವರಿಗೆ ಹಣ ನೀಡುತ್ತಿಲ್ಲ. ಆದ್ದರಿಂದ ಎಲ್ಲಾ ನಗರಸಭೆಯ ಸದಸ್ಯರು ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಧ್ವನಿಯಾಗಿ ನಾಯಿ ಕಚ್ಚಿದ ಗಾಯಾಳುಗಳಿಗೆ ಠರಾವು ಪಾಸ್ ಮಾಡಿಸಿ, ಪರಿಹಾರ ಒದಗಿಸಿಕೊಡುತ್ತೆವೆ ಎಂದರಷ್ಟೇ ಸಾಮನ್ಯ ಸಭೆಯಲ್ಲಿ ಪ್ರವೇಶ ನೀಡುತ್ತೆವೆ. ಇಲ್ಲದಿದ್ದರೇ ಹೋರಾಟ ಮುಂದುವರೆಸುತ್ತೆವೆ ಎಂದು ಪಟ್ಟು ಹಿಡಿದರು. ನಂತರ ನಗರಸಭೆಯ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಹಾಗೂ ಪೌರಾಯುಕ್ತರು ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.







