ಕಲಬುರಗಿ | ಪೆಟ್ರೋಲ್ ಬಂಕ್ ಕೆಲಸಗಾರನ ಮೇಲೆ ಹಲ್ಲೆ ಪ್ರಕರಣ : ಮೂವರ ಬಂಧನ

ಕಲಬುರಗಿ: ನಗರದ ವಿಶ್ವರಾಧ್ಯ ದೇವಸ್ಥಾನದ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕುವ ವಿಷಯಕ್ಕೆ ಜಗಳ ತೆಗೆದು ಬಂಕ್ ಕೆಲಸಗಾರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಒಂದು ಹರಿತ ಆಯುಧ ಹಾಗೂ ಎರಡು ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನ್ಯೂ ರಾಘವೇಂದ್ರ ಕಾಲೋನಿಯ ಬಲಬೀಮ್ ಸೇನೆ ಹುನಮಾನ ಗುಡಿ ಸಮೀಪದ ಮೋರೆ ಕಾಂಪ್ಲೇಕ್ಸ್ ಹತ್ತಿರ ನಿವಾಸಿ ವಿನೋದ @ ಚಾಕಲೇಟ ವಿನ್ಯಾ ಬಾಪು ಪಾಟೀಲ (18), ಕಲಬುರಗಿ ತಾಲ್ಲೂಕಿನ ಭೂಪಾಲ ತೆಗನೂರ ಗ್ರಾಮದ ನಾಗೇಶ ತಂದೆ ವಿಠಲರಾವ ಕಟ್ಟಿಮನಿ (19) ಹಾಗೂ ಆಳಂದ ಚಿಕ್ ಪೋಸ್ಟ್ ಹತ್ತಿರದ ರಾಮತೀರ್ಥ ನಗರ ನಿವಾಸಿ ವಿನೋದ @ ಟೈಗರ್ ವಿನೋದ ತಂದೆ ತಾಯಪ್ಪ ದಂಡಗುಲೆ (19) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್ ಬಂಕ್ ನಲ್ಲಿ ತ್ರಿಶೂಲ್ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಕುರಿತು ತ್ರಿಶೂಲ್ ತಂದೆ ಶಿವಕುಮಾರ್ ದೇವೇಂದ್ರಪ್ಪ ಧರ್ಮವಾಡಿ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹಲ್ಲೆ ಮಾಡಿದ ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







