Kalaburagi | ಸುಸ್ಥಿರ ಕೃಷಿ ಮತ್ತು ಕೃಷಿ ಉದ್ಯಮಶೀಲತೆ ಸಂಶೋಧನೆಗೆ ಸುಹಾಸ್ ಎಲ್. ಅವರಿಗೆ ಪಿಎಚ್‌ಡಿ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವ್ಯವಹಾರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸುಹಾಸ್ ಎಲ್. ಅವರಿಗೆ ಸುಸ್ಥಿರ ಕೃಷಿ ಮತ್ತು ಕೃಷಿ ಉದ್ಯಮಶೀಲತೆ ಕುರಿತ ಸಂಶೋಧನೆಗಾಗಿ ಪಿಎಚ್.ಡಿ. ಪದವಿ ಘೋಷಿಸಲಾಗಿದೆ.
ಉತ್ತರ ಕರ್ನಾಟಕದ ಆಯ್ದ ನಾಲ್ಕು ಕೃಷಿ ಕ್ಷೇತ್ರಗಳನ್ನು ಆಧರಿಸಿ ನಡೆಸಿದ ಅಧ್ಯಯನದಲ್ಲಿ ಸಮಗ್ರ ಮತ್ತು ಸಾವಯವ ಕೃಷಿ ಪದ್ಧತಿಗಳ ಪ್ರಯೋಜನಗಳನ್ನು ವಿಶ್ಲೇಷಿಸಲಾಗಿದೆ. ಈ ಪದ್ಧತಿಗಳ ಅನುಸರಣೆ ಮೂಲಕ ರೈತರ ಆದಾಯದಲ್ಲಿ ಶೇ.20ರಿಂದ 30ರಷ್ಟು ಹೆಚ್ಚಳವಾಗುವುದರ ಜತೆಗೆ ಕೃಷಿ ವೆಚ್ಚ ಕಡಿಮೆಯಾಗುತ್ತದೆ. ಅಲ್ಲದೆ, ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ಸ್ಥಳೀಯ ಉದ್ಯೋಗ ಸೃಷ್ಟಿಗೂ ನೆರವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಆರಂಭಿಕ ಹೂಡಿಕೆ, ಸಾವಯವ ಕೃಷಿಗೆ ಪರಿವರ್ತನೆಯ ಸಂದರ್ಭದಲ್ಲಿ ಇಳುವರಿ ಕುಸಿತ ಹಾಗೂ ಮಾರುಕಟ್ಟೆಯ ಕೊರತೆಯಂತಹ ಸವಾಲುಗಳನ್ನು ಅಧ್ಯಯನ ಗುರುತಿಸಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ರೈತರಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಮಾದರಿ ಕೃಷಿ ಕೇಂದ್ರಗಳನ್ನು ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ.
ಡಾ. ಸುಷ್ಮಾ ಎಚ್. ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರೊ. ಎಂ.ವಿ. ಅಳಗವಾಡಿ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನೆ ನಡೆದಿದೆ.
ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮತ್ತು ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು ಸುಹಾಸ್ ಹಾಗೂ ಅವರ ಮಾರ್ಗದರ್ಶಕರನ್ನು ಅಭಿನಂದಿಸಿದ್ದಾರೆ.






