ಕಲಬುರಗಿ | ನೃತ್ಯದಿಂದ ದೈಹಿಕ, ಮಾನಸಿಕ ಬಲವರ್ಧನೆ : ಪಿಎಸ್ಐ ತಿರುಮಲೇಶ್.ಕೆ

ಕಲಬುರಗಿ : ವಾಡಿ ತರುಣ ಸಂಘಗಳು ಬಡಾವಣೆಗಳಲ್ಲಿ ನೃತ್ಯ ಸ್ಪರ್ಧೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುವ ಅಪರೂಪದ ವೇದಿಕೆ ನೀಡುತ್ತಿರುವುದು ಶ್ಲಾಘನೀಯ ಎಂದು ಸ್ಥಳೀಯ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ ಕೆ. ಹೇಳಿದರು.
ವಾಡಿ ಪಟ್ಟಣದ ಧಮ್ಮ ದೀಕ್ಷಾ ಭೂಮಿಯಲ್ಲಿ ಸಿದ್ದಾರ್ಥ ತರುಣ ಸಂಘದ ವತಿಯಿಂದ 76ನೇ ಗಣರಾಜ್ಯೋತ್ಸವದ ನಿಮಿತ್ತ ಸ್ಥಳೀಯ ಶಾಲಾ ಹಮ್ಮಿಕೊಂಡ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ನೃತ್ಯ ಒಂದು ರೀತಿಯ ವ್ಯಾಯಾಮ, ಕ್ರೀಡೆಯಾಗಿದ್ದು, ದೇಹದ ಎಲ್ಲಾ ಅಂಗಗಳನ್ನು ಸಕ್ರಿಯಗೊಳಿಸಬಲ್ಲ ಮತ್ತು ಚುರುಕುಗೊಳಿಸಬಲ್ಲ ನೃತ್ಯದ ಅಭ್ಯಾಸದಿಂದ ಉಸಿರಾಟದ ನಿಯಂತ್ರಣದಿಂದ ಶರೀರದ ದೃಢತೆ, ಕೆಲವು ದೈಹಿಕ ನ್ಯೂನತೆಗಳನ್ನು ಕೂಡಾ ಸರಿಪಡಿಸಲು ಸಾಧ್ಯವಾಗಿ ದೇಹಕ್ಕೆ ಆಕರ್ಷಕ ರೂಪ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಟೋಪಣ್ಣ ಕೋಮಟೆ, ನೃತ್ಯ ಕಲೆಯನ್ನು ಒಂದು ಸ್ಪರ್ಧೆ ಎಂದು ತೆಗೆದುಕೊಳ್ಳದೇ ನಿಮ್ಮೊಳಗಿನ ಕಲೆಯ ಪ್ರದರ್ಶನ ಎಂದು ಭಾವಿಸಬೇಕು. ಸೋಲು ಗೆಲುವಿಗೆ ಹೆಚ್ಚಿನ ಮಹತ್ವ ನೀಡಿದರೆ, ಸಂಕಟವಾಗಿ ಎದುರಾಳಿಗಳ ಮೇಲೆ ದ್ವೇಶ ಹುಟ್ಟಬಹುದು. ಆಗ ನೀವು ನಿಮ್ಮ ನೃತ್ಯ ಕಲೆಯ ಮೇಲಿನ ಏಕಾಗ್ರತೆ ಕಳೆದುಕೊಳ್ಳುತ್ತಿರಿ ಎಂದು ಹೇಳಿದರು.
ಒಟ್ಟು 14 ಶಾಲೆಗಳು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದರೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ತೃತಿಯ ಸ್ಥಾನ ಮಿನಿ ರೋಜ್ ಆಂಗ್ಲ ಮಾಧ್ಯಮ ಶಾಲೆ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್, ಸೂರ್ಯಕಾಂತ ರದ್ದೇವಾಡಿ, ನಾಗೇಂದ್ರ ಜಯಗಂಗಾ, ಶರಣಬಸ್ಸು ಸಿರೂರಕರ, ಚಂದಪ್ಪ ಕಟ್ಟಿಮನಿ, ರಮೇಶ ಬಡಿಗೇರ, ಸಂಜಯ ಗೋಪಾಳೆ, ಭೀಮಶಾ ಮೈನಾಳಕರ, ದೊಡ್ಡೇಶ ಬಡಿಗೇರ, ಸುನೀಲ ಗುತ್ತೇದಾರ, ಮಹಾದೇವ ಮಾಲಗತ್ತಿ, ಖೇಮಲಿಂಗ ಬೆಳಮಗಿ, ಗುರುಪಾದ ದೊಡ್ಡಮನಿ, ಸಿದ್ದಾರ್ಥ ತರುಣ ಸಂಘದ ಅಧ್ಯಕ್ಷ ದಿಲೀಪ ಮೈನಾಳಕರ, ಉಪಾಧ್ಯಕ್ಷ ಮಹೇಶ ರಾಜಳ್ಳಿ, ಖಜಾಂಚಿ ವಿಶಾಲ ಬಡಿಗೇರ, ಪ್ರಮೋದ ಕಿಣ್ಣಿಕರ, ತೀರ್ಪುಗಾರರಾದ ಅಂಬರೀಶ ಬಡಿಗೆರ, ಜಾಕ್ಸನ್, ವಿನೋದ ರವಿ ಕೋಳಕೂರ, ಬುದ್ಧಪ್ರಿಯ ಕೋಮಟೆ ಸೇರಿದಂತೆ ಮತ್ತಿತರರು ಇದ್ದರು.







