Kalaburagi | ಪಿ.ಎಂ. ಕಿಸಾನ್ ಯೋಜನೆ: ರೈತರು ಮುಂದಿನ ಕಂತಿನ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ

ಕಲಬುರಗಿ: ಪಿಎಂ ಕಿಸಾನ್ (PM-KISAN) ಯೋಜನೆಯ ಅರ್ಹ ಫಲಾನುಭವಿ ರೈತರು ಮುಂದಿನ ಕಂತಿನ ಆರ್ಥಿಕ ನೆರವು ಪಡೆಯಲು ಬಯೋಮೆಟ್ರಿಕ್ ಅಥವಾ ಫೇಸ್ ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆಯುವುದು, ಮೃತಪಟ್ಟ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು ಹಾಗೂ ಅರ್ಹ ರೈತರಿಗೆ ಪಾರದರ್ಶಕವಾಗಿ ಹಣ ಜಮೆಯಾಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಮೂಲಕ ಮೃತಪಟ್ಟವರ ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಒಟಿಪಿ ವ್ಯವಸ್ಥೆಯನ್ನು ರದ್ದುಗೊಳಿಸಿ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೂ ಪ್ರತಿಯೊಬ್ಬ ಫಲಾನುಭವಿಯೂ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,99,067 ರೈತರ ಇ-ಕೆವೈಸಿ ಬಾಕಿ ಇದೆ. ಅಫಜಲಪುರದಲ್ಲಿ 26,786, ಆಳಂದದಲ್ಲಿ 31,954, ಚಿಂಚೋಳಿಯಲ್ಲಿ 19,324, ಚಿತ್ತಾಪುರದಲ್ಲಿ 17,097, ಕಲಬುರಗಿಯಲ್ಲಿ 18,418, ಕಾಳಗಿಯಲ್ಲಿ 13,792, ಕಮಲಾಪುರದಲ್ಲಿ 11,156, ಜೇವರ್ಗಿಯಲ್ಲಿ 21,056, ಸೇಡಂನಲ್ಲಿ 20,621, ಶಹಾಬಾದದಲ್ಲಿ 3,364 ಹಾಗೂ ಯಡ್ರಾಮಿಯಲ್ಲಿ 15,499 ರೈತರ ಇ-ಕೆವೈಸಿ ಬಾಕಿ ಉಳಿದಿದೆ.
ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಅಥವಾ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಸ್ಮಾರ್ಟ್‌ಫೋನ್ ಮೂಲಕ ಫೇಸ್ ದೃಢೀಕರಣದೊಂದಿಗೆ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.






