ಕಲಬುರಗಿ | ಪೋಕ್ಸೋ ಪ್ರಕರಣ : ಆರೋಪಿಗೆ 35 ವರ್ಷ ಜೈಲು ಶಿಕ್ಷೆ

ಕಲಬುರಗಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೋ) ನ್ಯಾಯಾಲಯವು ಆರೋಪಿಗೆ 35 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಯಲ್ಲಪ್ಪ ತಿರುಮಲ (22) ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾನೆ.
17 ವರ್ಷದ ವಿದ್ಯಾರ್ಥಿನಿಗೆ ಯಲ್ಲಪ್ಪ ಪ್ರೀತಿಸುವುದಾಗಿ ಪೀಡಿಸುತ್ತಿದ್ದ. ಕಳೆದ ವರ್ಷ 2023ರ ಆ. 8ರಂದು ಬಾಲಕಿ ಕಾಲೇಜು ಮುಗಿಸಿ, ಸೇಡಂ ಪಟ್ಟಣದ ಬಸ್ ನಿಲ್ದಾಣದತ್ತ ತೆರಳುತ್ತಿದ್ದಳು. ಅದೇ ವೇಳೆಯಲ್ಲಿ ಬಾಲಕಿಯನ್ನು ಹಿಂಬಾಲಿಸಿಕೊಂಡ ಹೋದ ಯಲ್ಲಪ್ಪ, ನಿನ್ನ ಜೊತೆಗೆ ಮಾತನಾಡುವುದಿದೆ ಎಂದು ಲಾಡ್ಜ್ ಒಂದಕ್ಕೆ ಕರೆದೊಯ್ದ ಅತ್ಯಾಚಾರ ಎಸಗಿದ್ದಾನೆ.
ಲಾಡ್ಜ್ ನಲ್ಲಿ 'ನನ್ನ ಜೊತೆಗೆ ಸರಿಯಾಗಿ ಏಕೆ ಮಾತನಾಡುತ್ತಿಲ್ಲ ಎಂದು ಆಕೆಯ ಮುಖಕ್ಕೆ ಹೊಡೆದು, ಅತ್ಯಾಚಾರ ಎಸಗಿ, ಜೀವ ಬೆದರಿಕೆಯೂ ಹಾಕಿದ್ದ. ಇದರಿಂದ ನೊಂದ ಬಾಲಕಿ ಮರುದಿನ ಮಾತ್ರೆಗಳನ್ನು ನುಂಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಕುರಿತು ವಿಚಾರಿಸಿದಾಗ ಅತ್ಯಾಚಾರಕ್ಕೆ ಒಳಗಾಗಿರುವುದು ಕಂಡುಬಂದಿದೆ. ಇದರ ಕುರಿತಾಗಿ ಅಲ್ಲಿನ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತಾಗಿ ಅಲ್ಲಿನ ಪಿಐ ಪಾಲಾಕ್ಷಯ್ಯ ಹಿರೇಮಠ ಅವರು ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವಿಶೇಷ ಪೋಕ್ಸೋ) ಎಫ್ಟಿಎಸ್ಸಿ-1 ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ಅವರು, ಯಲ್ಲಪ್ಪಗೆ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ 35 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.







