Kalaburagi | ಕಾವ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ : ಡಾ.ಶ್ರೀಶೈಲ ನಾಗರಾಳ

ಕಲಬುರಗಿ: ಕಾವ್ಯವು ಮನಸ್ಸಿನ ಪರಿವರ್ತನೆಯ ಜತೆಗೆ ಸಮಾಜವನ್ನು ಬದಲಿಸುವ ಶಕ್ತಿಯನ್ನೂ ಹೊಂದಿದೆ ಎಂದು ವಿಮರ್ಶಕ ಹಾಗೂ ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮಣ್ಣ ಎಚ್. ಧನ್ನಿ ಅವರ ‘ಬಲ್ಲಂಥ ಜಾಣೆ ಒಡದ್ದೇಳು ಒಗಟುಗಳು’, ಶಾರದಾ ಕಂದಗೂಳೆ ಅವರ ‘ಮನದ ಮಿಡಿತ’, ರಾಜಶ್ರೀ ಕುಂಬಾರ ಅವರ ‘ಪ್ರೀತಿಗಾಸರೆ’ ಕವನ ಸಂಕಲನ ಹಾಗೂ ಜಯಶ್ರೀ ಜಮಾದಾರ ಅವರ ‘ಅಂತರಂಗದ ಪಯಣ’ ಕೃತಿಗಳ ಕುರಿತು ಮಾತನಾಡಿದ ಅವರು, ಕಾವ್ಯವನ್ನು ಕೇವಲ ಮನರಂಜನೆ ಎಂದು ಪರಿಗಣಿಸಬಾರದು. ಅದರ ರಸಾನುಭವ ಮತ್ತು ಭಾವಸ್ಪರ್ಶ ಬದುಕಿನ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತವೆ. ಒತ್ತಡದ ಜೀವನವನ್ನು ಕಡಿಮೆ ಮಾಡಿ, ಪ್ರೀತಿ, ಶಾಂತಿ ಹಾಗೂ ನೆಮ್ಮದಿಯನ್ನು ಮೂಡಿಸುವ ಶಕ್ತಿ ಕಾವ್ಯಕ್ಕಿದೆ. ಹೀಗಾಗಿ ಕಾವ್ಯದ ಮೂಲಕ ಬದಲಾವಣೆ ತರುವ ಪ್ರಕ್ರಿಯೆ ನಿರಂತರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾವ್ಯವು ವರ್ತಮಾನಕ್ಕೆ ಪ್ರತಿಕ್ರಿಯಾತ್ಮಕವಾಗಿರುತ್ತದೆ. ವರ್ತಮಾನವೆಂದರೆ ಮನುಷ್ಯನ ವರ್ತನೆ. ಸಮಾಜಮುಖಿಯಾದ ಕಾವ್ಯಕ್ಕೆ ಮಾತ್ರ ದೀರ್ಘಕಾಲದ ಆಯುಷ್ಯ ಇರುತ್ತದೆ. ಕವಿಯಾದವನಿಗೆ ಪರಂಪರೆಯ ತಿಳುವಳಿಕೆ ಅತ್ಯಗತ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಾವ್ಯವು ಮನುಷ್ಯನ ಅಂತರಾಳದ ಭಾವನೆಗಳು, ಬದುಕಿನ ಸಂಕಷ್ಟಗಳು ಹಾಗೂ ಆಶೋತ್ತರಗಳಿಗೆ ಧ್ವನಿಯಾಗುತ್ತದೆ. ಸಾಮಾನ್ಯ ಜನರ ಬದುಕಿನ ಅನುಭವಗಳು ಕಾವ್ಯದ ರೂಪದಲ್ಲಿ ಜೀವಂತವಾಗಿರುತ್ತವೆ. ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಕಸಾಪ ಜಿಲ್ಲೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ನಿತ್ಯ ನೂತನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೆ ಸಾಹಿತ್ಯದ ಬೆಳಕು ಹಾಗೂ ಕನ್ನಡದ ಕಂಪನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕೇಸರಿ ಬೆಟ್ಟದ ಶ್ರೀ ಬಾಲತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯರು ಕೃತಿಗಳನ್ನು ಜನಾರ್ಪಣೆ ಮಾಡಿದರು. ಶಿಕ್ಷಕಿ ಭುವನೇಶ್ವರಿ ಹಳ್ಳಿಖೇಡ, ಶಿವರಾಜ ಅಂಡಗಿ, ಧರ್ಮರಾಜ ಜವಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಮಹಾನಂದಾ ಹುಲಿ, ಶಿವಲೀಲಾ ಕಲಗುರ್ಕಿ, ಕುಪೇಂದ್ರ ಬರಗಾಲಿ, ಸುರೇಶ ದೇಶಪಾಂಡೆ, ಈರಣ್ಣ ಸೋನಾರ, ಪರಮಾನಂದ ಸರಸಂಬಿ, ಹಣಮಂತರಾವ ಪೆಂಚನಪಳ್ಳಿ, ಸಿದ್ಧರಾಮ ಹಂಚನಾಳ ಹಾಗೂ ಡಾ. ರೆಹಮಾನ್ ಪಟೇಲ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ವಿಶ್ವಗುರು ಬಸವಣ್ಣನವರ ಕುರಿತು ಇತ್ತೀಚೆಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಸವಾದಿ ಶರಣರ ಬದುಕು ಮತ್ತು ಸಂದೇಶಗಳು ಸದಾ ಪ್ರಸ್ತುತವಾಗಿವೆ. ಇಂತಹ ಮಹಾನ್ ವ್ಯಕ್ತಿಗಳ ಕುರಿತು ವಿಕೃತ ಮನೋಭಾವದವರು ಸಮಾಜದಲ್ಲಿ ಗೊಂದಲ ಉಂಟುಮಾಡುವ ಉದ್ದೇಶದಿಂದ ಪ್ರಕಟಿಸುವ ಪುಸ್ತಕಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.
- ಶ್ರೀಶೈಲ ನಾಗರಾಳ, ಹಿರಿಯ ಸಾಹಿತಿ






