Kalaburagi | ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: 18 ಆರೋಪಿಗಳ ಬಂಧನ, 41 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ

ಕಲಬುರಗಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 10 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 18 ಆರೋಪಿಗಳನ್ನು ಬಂಧಿಸಿ, ಸುಮಾರು 41 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ಬೆಳ್ಳಿ, ಕೇಬಲ್ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಕಾರ್ಯಾಚರಣೆಯ ವಿವರಗಳನ್ನು ನೀಡಿದರು.
ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಳ್ಳಿ ಗ್ರಾಮದ ಮನೆಯೊಂದರಲ್ಲಿ 160 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ರೂ. ನಗದು ಕಳವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮನೆಯ ಕೆಲಸಗಾರನೇ ಕಳ್ಳತನ ಮಾಡಿರುವುದನ್ನು ಪತ್ತೆಹಚ್ಚಿ, ಮಚೇಂದ್ರ ತಂದೆ ಬಸಣ್ಣ ಪೂಜಾರಿ (31) ಎಂಬಾತನನ್ನು ಬಂಧಿಸಿದ್ದಾರೆ.
ಆತನಿಂದ 26.81 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ಹಾಗೂ 4,23,850 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಪಂಪ್‌ಸೆಟ್ ಕಳ್ಳತನ ಪ್ರಕರಣ ಪತ್ತೆ :
ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈತರ ಪಂಪ್‌ಸೆಟ್‌ಗಳನ್ನು ಕಳವು ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಣ್ಣ ತಂದೆ ರಾಮಪ್ಪ ಹೇಳವರ (35) ಹಾಗೂ ಅಂಜಪ್ಪ ಅಲಿಯಾಸ್ ಮಂಜುನಾಥ ತಂದೆ ಚಂದ್ರಪ್ಪ ಯಾಳವಾರ (35) ಅವರನ್ನು ಬಂಧಿಸಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುರಿ ಕಳ್ಳತನ ಪ್ರಕರಣದಲ್ಲಿ ಸಂತೋಷ ತಂದೆ ಲಕ್ಷ್ಮಣ ಚವ್ಹಾಣ ಎಂಬಾತನನ್ನು ಬಂಧಿಸಲಾಗಿದ್ದು, ಕಳವು ಮಾಡಿದ ಕುರಿಗಳನ್ನು ಮಾರಾಟ ಮಾಡಿ ಬಂದ 1.50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ಮುನ್ನಾ ರಾಠೋಡ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಚಿನ್ನ ದೋಚಿದ್ದ ಆರೋಪಿ ಬಂಧನ :
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ನಕಲಿ ಗುರುತಿಸಿಕೊಂಡು ವ್ಯಕ್ತಿಯೊಬ್ಬರಿಂದ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸದುಲ್ಲಾ ತಂದೆ ಅಫ್ಜಲ್ ಅಲಿ ಖಾನ್ ಇರಾನಿ (36) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 3 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.
ಇದೇ ಠಾಣೆ ವ್ಯಾಪ್ತಿಯ ಎರಡು ಕುರಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ರೋಷನ್ ಚವ್ಹಾಣ, ಪ್ರಜ್ವಲ್ ಮಲ್ಲಿಕಾರ್ಜುನ, ಶರಣಪ್ಪ ಭೋಜರಾಜ ಜಾನಬೋ, ಶಿವಪ್ಪ ಬಸವರಾಜ ನಾಟೇಕರ್, ಪರ್ವಿನ್ ಸಿದ್ದು ರಾಠೋಡ ಹಾಗೂ ಮಿಥುನ ಪಾಂಡು ಚವ್ಹಾಣ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2.30 ಲಕ್ಷ ರೂ. ನಗದು ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಶಹಾಬಾದ್ ಪೊಲೀಸರ ಕಾರ್ಯಾಚರಣೆ :
ಶಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಹಗಲು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 5.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಕೇಬಲ್ ಕಳ್ಳತನದ ಎರಡು ಪ್ರಕರಣಗಳಲ್ಲೂ ಐವರನ್ನು ಬಂಧಿಸಿ 2.70 ಲಕ್ಷ ರೂ. ಮೌಲ್ಯದ ಕೇಬಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಪೊಲೀಸ್ ತಂಡಕ್ಕೆ ಎಸ್ಪಿ ಶ್ಲಾಘನೆ :
10 ಕಳ್ಳತನ ಪ್ರಕರಣಗಳನ್ನು ಭೇದಿಸಿ 18 ಆರೋಪಿಗಳನ್ನು ಬಂಧಿಸಿ, ಕಳುವಾದ ಮುದ್ದೆಮಾಲು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಿವೈಎಸ್‌ಪಿಗಳಾದ ತಮ್ಮಾರಾಯ ಪಾಟೀಲ, ಶಂಕರಗೌಡ ಪಾಟೀಲ, ಸಿಪಿಐಗಳಾದ ಜಗದೀಶ ಕೆ.ಜಿ., ಎಸ್.ಸಿ. ಪಾಟೀಲ, ಪಿಎಸ್‌ಐಗಳಾದ ಮಹಾಂತೇಶ ಪಾಟೀಲ, ಸಿದ್ದರಾಮ, ಸಿದ್ದಲಿಂಗ, ಗೌತಮ, ಮಂಜುನಾಥ ರೆಡ್ಡಿ, ತಿರುಮಲೇಶ, ರೇಣುಕಾ, ಪಿ.ಎಸ್. ವನಂಜಕರ್, ಮಲ್ಲಿಕಾರ್ಜುನ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿದರು.
ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಮಾತನ್ನು ನಂಬದೆ ಎಚ್ಚರಿಕೆ ವಹಿಸಬೇಕು. ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಹೇಳಿಕೊಂಡು ಬಂಗಾರ ಅಥವಾ ಇತರೆ ಬೆಲೆಬಾಳುವ ವಸ್ತುಗಳನ್ನು ಕೇಳಿದರೆ ಯಾವುದೇ ಕಾರಣಕ್ಕೂ ನೀಡಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.
-ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ






