ಕಲಬುರಗಿ | ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗೆ 1.50 ಲಕ್ಷ ರೂ. ದಂಡ!

ಸಾಂದರ್ಭಿಕ ಚಿತ್ರ
ಕಲಬುರಗಿ: ಪ್ರಕರಣವೊಂದರ ತನಿಖೆಗೆ ಆರೋಪಿಗಳು ಸಹಕರಿಸುತ್ತಿಲ್ಲ ಎಂಬ ಸುಳ್ಳು ನೆಪವೊಡ್ಡಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದ ಪೊಲೀಸ್ ಅಧಿಕಾರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1.50 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಹಿಂದೆ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ಆಗಿದ್ದ ಸೋಮಲಿಂಗ ಕಿರದಳ್ಳಿ (ಪ್ರಸ್ತುತ ಡಿವೈಎಸ್ಪಿ) ಅವರು ಈ ದಂಡಕ್ಕೆ ಗುರಿಯಾದ ಅಧಿಕಾರಿ. ಈ ಮೊತ್ತವನ್ನು ಪ್ರಕರಣದ ಮೂವರು ಆರೋಪಿಗಳಿಗೆ ತಲಾ 50 ಸಾವಿರದಂತೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಧೀಶರಾದ ಮಹಮ್ಮದ್ ಮುಜೀರ್ ಉಲ್ಲಾ ಅವರಿದ್ದ ಪೀಠವು ಆದೇಶಿಸಿದೆ.
ಘಟನೆಯ ವಿವರ:
ಅಜಾದ್ಪುರ ರಸ್ತೆಯ ಅಹ್ಮದ್ ನಗರ ನಿವಾಸಿಗಳಾದ ಸಲ್ಲಾವುದ್ದೀನ್ ಶೇಖ್, ಶಬಾನಾ ಬೇಗಂ ಹಾಗೂ ಸರ್ವರ್ ಮತೀನ್ ವಿರುದ್ಧ 2024ರ ಡಿ.19ರಂದು ಬ್ರಹ್ಮಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆರೋಪಿಗಳು ತನಿಖೆಗೆ ನಿಯಮಿತವಾಗಿ ಹಾಜರಾಗುತ್ತಿದ್ದರು. ಆದರೆ, ತನಿಖಾಧಿಕಾರಿ ಸೋಮಲಿಂಗ ಕಿರದಳ್ಳಿ ಅವರು "ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ, ಆದ್ದರಿಂದ ಅವರ ಜಾಮೀನು ರದ್ದುಗೊಳಿಸಬೇಕು" ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು, ತಮ್ಮ ಕಕ್ಷಿದಾರರು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ದಿನದ ಸಿಸಿಟಿವಿ ಫೂಟೇಜ್ ಹಾಗೂ ಇತರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸತ್ಯಾಂಶವನ್ನು ಮನವರಿಕೆ ಮಾಡಿಕೊಟ್ಟರು. ಸುಳ್ಳು ಮಾಹಿತಿ ನೀಡಿ ನ್ಯಾಯಾಲಯದ ಹಾದಿ ತಪ್ಪಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಅಧಿಕಾರಿಗೆ ದಂಡ ವಿಧಿಸಲಾಗಿದೆ.
ಜೊತೆಗೆ, ಈ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.







