ಕಲಬುರಗಿ | ಪೊಲೀಸ್ ಸಿಬ್ಬಂದಿಯ ಹತ್ಯೆ ಪ್ರಕರಣ: 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಹಾರಾಷ್ಟ್ರದಲ್ಲಿ ಪೊಲೀಸರಿಗೆ ʼಇನ್ಫಾರ್ಮರ್ʼ ಆಗಿ ಕೆಲಸ ಮಾಡುತ್ತಿದ್ದ ಆರೋಪಿ !

ಕಲಬುರಗಿ : ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಜೈಲಿನಿಂದ ತಪ್ಪಿಸಿಕೊಂಡು 11 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡು, ಅಲ್ಲಿನ ಪೊಲೀಸರಿಗೆ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಕಲಬುರಗಿ ಸಬ್-ಅರ್ಬನ್ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಚಿತ್ತಾಪೂರ ತಾಲ್ಲೂಕಿನ ಭಾಗೋಡಿ ಅಂಬರೀಷ ಅಂಬಾದಾಸ ನಾಟಿಕಾರ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
2009ರಲ್ಲಿ ನಗರದ ಬಿದ್ದಾಪೂರ ಕಾಲೋನಿಯ ಜೆ.ಬಿ ಕಾಂಪ್ಲೆಕ್ಸ್ ಹತ್ತಿರದಲ್ಲಿ ನಡೆದ ಇಬ್ಬರ ನಡುವಿನ ಗಲಾಟೆಗೆ ಸಂಬಂಧಿಸಿದಂತೆ ಬಂಜಾರಾ ಕ್ರಾಸ್ ಹತ್ತಿರ ಆರೋಪಿ ಅಂಬರೀಷ ಕರ್ತವ್ಯದ ಮೇಲೆ ಇದ್ದ ಅಶ್ವಿನ್ ಕುಮಾರ್ ಎಂಬ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯವು 2011 ರಂದು ಆರೋಪಿ ಅಂಬರೀಷಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿ ಆದೇಶಿಸಿತ್ತು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇತರೆ ಶಿಕ್ಷಾಬಂಧಿ ಆರೋಪಿಗಳೊಂದಿಗೆ ಜಗಳ ಮಾಡಿಕೊಂಡಾಗ, ಆರೋಪಿಯನ್ನು ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. 2014ರಲ್ಲಿ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಯನ್ನು ದಾಖಲು ಮಾಡಿದಾಗ ಸಿಬ್ಬಂದಿಗಳ ಕಣ್ಣು ತಪ್ಪಿಸಿ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶೇಲ್ ವಾರ್ಡ್ ನಿಂದ ಪರಾರಿಯಾಗಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ವಿಜಯಪುರ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆಗಾಗಿ ಕಲಬುರಗಿ ನಗರದ ಸಬ್-ಅರ್ಬನ್ ಉಪ ವಿಭಾಗ ಪೊಲೀಸ್ ಆಯುಕ್ತರಾದ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಪಿ.ಐ ಸಂತೋಷ ಎಲ್.ತಟ್ಟೆಪಳ್ಳಿ ನೇತೃತ್ವದ ಸಿಬ್ಬಂದಿಗಳಾದ ಭೀಮಾ ನಾಯಕ, ಶಶಿಕಾಂತ, ಚನ್ನವಿರೇಶ ಅವರನ್ನೊಳಗೊಂಡ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಪರಿಶೀಲಿಸಿ, ಫೆ.26 ರಂದು ಆರೋಪಿಯನ್ನು ಪುಣೆ ನಗರದಲ್ಲಿ ವಶಕ್ಕೆ ಪಡೆದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.







