Kalaburagi | ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು
ವಾಲ್ಮೀಕಿ ವೃತ್ತದಲ್ಲಿ ಟೆಂಟ್ ತೆರವು; ರಸ್ತೆ ಬದಿಯಲ್ಲಿ ಮುಂದುವರಿದ ರೈತರ ಧರಣಿ

ಕಲಬುರಗಿ: ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವುದು, ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದ ರೈತರನ್ನು ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದರು.
ನಗರದ ಜೇವರ್ಗಿ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದ ಬಳಿ ರೈತರು ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಡಿಸಿಪಿ ಶಾಲೂ ಅವರ ನೇತೃತ್ವದಲ್ಲಿ ಪೊಲೀಸರು ಟೆಂಟ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರರಾದ ಸಿದ್ದರಾಮ ದನ್ನೂರ್, ಬಸವರಾಜ ಕೋರಿ, ಮಲ್ಲಿಕಾರ್ಜುನ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಹಾಗೂ ರೈತ ಮುಖಂಡರ ನಡುವೆ ವಾಗ್ವಾದ ನಡೆಯಿತು. ಪೊಲೀಸರ ಕ್ರಮಕ್ಕೆ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಟೆಂಟ್ ತೆರವುಗೊಳಿಸಿದರೂ ಪ್ರತಿಭಟನೆಯಿಂದ ಹಿಂದೆ ಸರಿಯದ ರೈತರು ರಸ್ತೆ ಪಕ್ಕದಲ್ಲಿ ಮತ್ತೆ ಟೆಂಟ್ ಹಾಕಿಕೊಂಡು ಧರಣಿ ಮುಂದುವರಿಸಿದ್ದಾರೆ. ವಾಲ್ಮೀಕಿ ವೃತ್ತದ ಸಮೀಪವೇ ಕರೆಪ್ಪ ಕರಗೊಂಡ, ಪಿಡ್ಡಪ್ಪ ಜಾಲಗಾರ ಸೇರಿದಂತೆ ಇತರ ರೈತರು ಪ್ರತಿಭಟನೆ ಮುಂದುವರಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.






