ಕಲಬುರಗಿ | ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಕಡಿತ ; ಮೊಬೈಲ್ ಟಾರ್ಚ್ ನಲ್ಲಿ ಮಕ್ಕಳಿಗೆ ಚಿಕಿತ್ಸೆ

ಸಾಂದರ್ಭಿಕ ಚಿತ್ರ PC | Meta AI
ಕಲಬುರಗಿ : ನಗರದ ಜಿಮ್ಸ್ (ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಯಲ್ಲಿ ರಾತ್ರಿಯ ವೇಳೆ ವಿದ್ಯುತ್ ಕಡಿತದಿಂದ ಮೊಬೈಲ್ ಟಾರ್ಚ್ ಹಿಡಿದು ಮಕ್ಕಳಿಗೆ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ 11 ಗoಟೆಯ ಸುಮಾರಿಗೆ ಜಿಮ್ಸ್ ಆಸ್ಪತ್ರೆಯ ನವಜಾತ ಶಿಶು ಘಟಕದಲ್ಲಿ ಏಕಾಏಕಿ ವಿದ್ಯುತ್ ಕಡಿತವಾಗಿದೆ. ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ನಿಂದ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡಿದ್ದು, ಇದರಿಂದ ಮಕ್ಕಳ ಪೋಷಕರು ಆತಂಕಗೊಂಡಿದ್ದರು. ಸುಮಾರು ಒಂದೆರಡು ಗಂಟೆಗಳ ಬಳಿಕ ವಿದ್ಯುತ್ ಬಂದಿದ್ದು, ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನವಜಾತ ಶಿಶು ಘಟಕದ ಟ್ರಾನ್ಸ್ ಫಾರ್ಮರ್ ಕೈಕೊಟ್ಟಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿದ್ದೇವೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಆದರೆ, ಎಳೆ ಕಂದಮ್ಮಗಳು ಇರುವ ವಾರ್ಡ್ ನಲ್ಲಿ ಕನಿಷ್ಠ ಜನರೇಟರ್ ಅಥವಾ ಯುಪಿಎಸ್ ವ್ಯವಸ್ಥೆಯಾದರೂ ಮಾಡಬೇಕಿತ್ತು. ಈ ವಾರ್ಡ್ ನಲ್ಲಿ ಐಸಿಯೂ, ಎನ್ಸಿಯೂ ಘಟಕಗಳಿವೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಲ್ಲ. ಜಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಎಡವಟ್ಟು ಇದೇ ಮೊದಲಲ್ಲ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.







