ಕಲಬುರಗಿ | ಕನ್ನಡ ಭಾಷೆಯ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ : ಸಾಹಿತಿ ಎ.ಕೆ.ರಾಮೇಶ್ವರ

ಕಲಬುರಗಿ : ಕನ್ನಡ ಭಾಷೆ ಸಂರಕ್ಷಣೆ ಅದರ ಬಳಕೆ ಮತ್ತು ಅದನ್ನು ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.
ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕರ್ನಾಟಕ ರಾಜ್ಯೋತ್ಸವ ಆಚರಣೆ ಇದು ಕೇವಲ ಒಂದು ದಿನದ ಆಚರಣೆಯಲ್ಲ, ಇದು ಕನ್ನಡದ ಗೌರವ, ಕನ್ನಡಿಗನ ಅಸ್ತಿತ್ವ ಮತ್ತು ನಮ್ಮ ನಾಡಿನ ಸಮೃದ್ಧ ಪರಂಪರೆಯ ಸಂಕೇತ. ಕನ್ನಡ ಅದು ನಮ್ಮ ಸಂಸ್ಕೃತಿ, ಮನೋಭಾವ ಮತ್ತು ಬದುಕಿನ ಶೈಲಿಯನ್ನು ರೂಪಿಸುವ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದ ಅತಿಥಿಯಾದ ವಿಶ್ರಾಂತ ಪ್ರಾಧ್ಯಾಪಕ ಕೆ.ಎಸ್.ನಾಯಕ್ ಮಾತನಾಡಿ, ಜಾಗತೀಕರಣದ ಈ ಭರಾಟೆಯಲ್ಲಿ ಬಹುತೇಕ ಭಾಷೆ ಮತ್ತು ಸಂಸ್ಕೃತಿಗಳು ಕೊಚ್ಚಿ ಹೋಗುತ್ತಿರುವ ಈ ಸಂದರ್ಭದಲ್ಲಿ ಇಂದು ನಾವು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಹಳ ಶ್ರೀಮಂತವಾಗಿದೆ. ಪಂಪ, ರನ್ನ, ಶಂಕರಾಚಾರ್ಯರಿಂದ ಹಿಡಿದು ಕುವೆಂಪು, ಡಾ.ರಾಜಕುಮಾರ, ಕೆ.ಎಸ್.ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿಗಳವರೆಗೆ ನಮ್ಮ ಕನ್ನಡಕ್ಕೆ ಅಭಿಮಾನ ಸಲ್ಲಿಸುವ ಅನೇಕ ಮಹಾನುಭಾವರು ನಮ್ಮ ನಾಡಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ವಿಶ್ರಾಂತ ಪ್ರಾಧ್ಯಾಪಕ ವೆಂಕಣ್ಣ ಡೊಣ್ಣೆಗೌಡರ್ ಮಾತನಾಡಿ, ಇಂದಿನ ವೇಗದ ಜಗತ್ತಿನಲ್ಲಿ ನಾವು ಕನ್ನಡವನ್ನು ಕಳೆದುಕೊಳ್ಳುವಂತೆ ಆಗಬಾರದು. ನಮ್ಮ ಮಕ್ಕಳಲ್ಲಿ ಕನ್ನಡದ ಪ್ರೀತಿ, ಭಾಷೆಯ ಗೌರವ ಮತ್ತು ಸಂಸ್ಕೃತಿಯ ಬೇರನ್ನು ಬಿತ್ತುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ್, ಕಮಲಾನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವಕುಮಾರ, ಪ್ರಾಧ್ಯಾಪಕಿ ಡಾ.ಸಂಗೀತಾ ಪಾಟೀಲ, ವಿದ್ಯಾರ್ಥಿಗಳಾದ ಚೆನ್ನಬಸವ, ಸಂಜನಾ ಹಾಗೂ ಚೇತನ ಕವನ ವಾಚನ ಮಾಡಿದರು. ಪ್ರಾಧ್ಯಾಪಕಿ ಅನಿತಾ ಗೊಬ್ಬುರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಡಾ.ಪಿಂಕ್ಯಾಯಿನಿ ವಂದಿಸಿದರು. ಸಂಜನಾ ನಿರೂಪಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರಾದ ಚನ್ನಬಸವ, ಕಲ್ಮೇಶ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







