Kalaburagi | ಸ್ಥಳೀಯ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಅಗತ್ಯ: ಶಿವಾನಂದ ಕಳವೆ
ಸಿಯುಕೆಯಲ್ಲಿ ‘ಅಭ್ಯುದಯ-2026’ ಕನ್ನಡ ರಾಜ್ಯೋತ್ಸವ ಸಂಭ್ರಮ

ಕಲಬುರಗಿ : ಆಧುನಿಕ ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಜೊತೆಗೆ ನಮ್ಮ ನಾಡಿನ ನೈಸರ್ಗಿಕ ಸಂಪನ್ಮೂಲ, ಗ್ರಾಮೀಣ ಸಂಸ್ಕೃತಿ, ಸ್ಥಳೀಯ ಜ್ಞಾನ ಹಾಗೂ ಪರಂಪರೆಯನ್ನು ಸಂರಕ್ಷಿಸುವುದು ಅಗತ್ಯ. ನಮ್ಮ ಹಳ್ಳಿಗಳ ಬೇರುಗಳನ್ನು ಅರಿಯದೆ ಅಭಿವೃದ್ಧಿಯತ್ತ ಸಾಗುವುದು ಸೂಕ್ತವಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ರಾಜ್ಯೋತ್ಸವ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ಅಭ್ಯುದಯ-2026’ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.
ನೀರು ಮತ್ತು ಪರಿಸರವೇ ಆರೋಗ್ಯದ ಗುಟ್ಟು. ಗ್ರಾಮೀಣ ಜನಪದ ಜೀವನದಲ್ಲಿ ಅಪಾರ ವಿಜ್ಞಾನ ಮತ್ತು ಜ್ಞಾನ ಅಡಗಿದೆ. ನಮ್ಮ ಹಿರಿಯರು ಅನುಭವದ ಮೂಲಕ ರೂಪಿಸಿದ ಕೆರೆಕಟ್ಟೆಗಳು, ಜಲಸಂರಕ್ಷಣಾ ವ್ಯವಸ್ಥೆಗಳು ಹಾಗೂ ವಾಸ್ತುಶಿಲ್ಪ ಇಂದಿನ ಎಂಜಿನಿಯರಿಂಗ್ ಜ್ಞಾನಕ್ಕೂ ಸವಾಲಾಗಿವೆ. ಆಧುನಿಕ ಸೌಲಭ್ಯಗಳಿಂದ ನಾವು ಬೆಳೆದಿದ್ದರೂ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ವಿಷಾದಿಸಿದರು.
ರಾಜ್ಯದಲ್ಲಿ ಬರಗಾಲದ ತೀವ್ರತೆ ಹೆಚ್ಚುತ್ತಿದ್ದು, ಲಕ್ಷಾಂತರ ಕೊಳವೆಬಾವಿಗಳು ಬತ್ತಿಹೋಗಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಕೃಷಿ ಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಏಕಬೆಳೆ ಪದ್ಧತಿಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.
ನಮ್ಮ ನಾಡು, ಕಾಡು, ನದಿ ಮತ್ತು ನೀರನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಸ್ಥಳೀಯ ಇತಿಹಾಸ, ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕ ಹಾಗೂ ಸಾಹಿತ್ಯವನ್ನು ಓದುವ ಮೂಲಕ ಮರೆತುಹೋಗುತ್ತಿರುವ ಕನ್ನಡದ ಪದಗಳು ಮತ್ತು ಭಾಷೆಯ ಸೊಗಡನ್ನು ಜೀವಂತವಾಗಿಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಹೋರಾಟಗಳು ಹಾಗೂ ಹೋರಾಟಗಾರರ ತ್ಯಾಗ ಮತ್ತು ಪರಿಶ್ರಮದ ಇತಿಹಾಸವನ್ನು ಯುವಜನತೆ ತಿಳಿದುಕೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಆದ್ಯತೆ ನೀಡಬೇಕು. ಈ ಭಾಗದ ಹಿಂದುಳಿದ ಕ್ಷೇತ್ರಗಳ ಕುರಿತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಧ್ಯಯನ ನಡೆಸಿ, ಸಮಗ್ರ ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಈ ವರದಿಗಳು ಸರ್ಕಾರದ ನೀತಿ ಮತ್ತು ಯೋಜನೆಗಳ ರೂಪಿಸುವಿಕೆಗೆ ಆಧಾರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಎತ್ತಿನ ಗಾಡಿಯಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ, ಡೊಳ್ಳು ಕುಣಿತ, ವಿವಿಧ ಕಲಾತಂಡಗಳ ನೃತ್ಯ ಪ್ರದರ್ಶನ ಹಾಗೂ ನೂರಾರು ಮೀಟರ್ ಉದ್ದದ ಕನ್ನಡ ಧ್ವಜದೊಂದಿಗೆ ಶೋಭಾಯಾತ್ರೆ ನಡೆಯಿತು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕನ್ನಡಾಭಿಮಾನದಿಂದ ಪಾಲ್ಗೊಂಡರು.
ಪ್ರಭಾರ ಕುಲಸಚಿವ ಪ್ರೊ. ಚನ್ನವೀರ ಆರ್.ಎಂ., ಕಾನೂನು ಅಧ್ಯಯನ ವಿಭಾಗದ ಡೀನ್ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ. ಗಣಪತಿ ಬಿ. ಸಿನ್ನೂರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿನಿ ಲೀನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪಾಂಡುರಂಗ ಪತ್ತಿ ವಂದಿಸಿದರು. ಮುತ್ತಣ್ಣ ನಿರೂಪಿಸಿದರು.
ರಾಜ್ಯೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟ, ಭಾಷಣ, ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆ ವಿಭಾಗದ ವಿದ್ಯಾರ್ಥಿಗಳು ವಂದೇ ಮಾತರಂ, ಕನ್ನಡ ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿದರು. ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






