ಕಲಬುರಗಿ | ಕಬ್ಬಿನ ಬೆಂಬಲ ಬೆಲೆ ಬಗ್ಗೆ ಸುಳ್ಳು ಹೇಳಿಕೆ ಕೊಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲು ರಾಜಕುಮಾರ ಬಡದಾಳ ಆಗ್ರಹ

ಕಲಬುರಗಿ: ಕಬ್ಬಿನ ಬೆಂಬಲ ಬೆಲೆ ವಿಚಾರದಲ್ಲಿ ಅಫಜಲಪುರ ಬಂದ್ ವೇಳೆ ತಪ್ಪುಮಾಹಿತಿ ನೀಡಿ ರೈತರ ಹೋರಾಟವನ್ನು ದಿಕ್ಕು ತಪ್ಪಿಸಿದ ಆರೋಪದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾವ್ ಮೋಸಳಿಯನ್ನು ತಕ್ಷಣ ಅಮಾನತು ಮಾಡಲು ಜೆಡಿಎಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ ಆಗ್ರಹಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮನವಿ ಸಲ್ಲಿಸಿದ ಅವರು, ಅಫಜಲಪುರ ಬಂದ್ ವೇಳೆ ಬೆಂಬಲ ಬೆಲೆ ಹೆಚ್ಚಳಕ್ಕಾಗಿ ಹೋರಾಟ ನಡೆಯುತ್ತಿದ್ದಾಗ ಉಪನಿರ್ದೇಶಕರು ಸಾರ್ವಜನಿಕರು ಮತ್ತು ಶಾಸಕರ ಸಮ್ಮುಖದಲ್ಲಿ ಕಬ್ಬಿನ ಬೆಂಬಲ ಬೆಲೆ 3,165 ರೂ. ನೀಡಲಾಗುತ್ತದೆ ಎಂದು ಹೇಳಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಆದರೆ ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕೃತವಾಗಿ 2950 ರೂ. + 50 ರೂ. ಸೇರಿ 3000 ರೂ. ಬೆಂಬಲ ಬೆಲೆಯನ್ನು ಘೋಷಿಸಿರುವುದರಿಂದ, ಅಧಿಕಾರಿಯ ಹೇಳಿಕೆ ಸುಳ್ಳಾಗಿರುವುದು ಸ್ಪಷ್ಟವಾಗಿದೆ ಎಂದು ಬಡದಾಳ ದೂರಿದ್ದಾರೆ.
“ತಪ್ಪು ಹೇಳಿಕೆ ನೀಡಿ ಹೋರಾಟವನ್ನು ನಿಲ್ಲಿಸಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲವಾದರೆ ಅವರು ಹೇಳಿದಂತೆ 3,165 ರೂ. ದರ ನಿಗದಿ ಮಾಡಬೇಕು. ನಮ್ಮ ಬೇಡಿಕೆಗೆ ವಾರದೊಳಗೆ ಸ್ಪಂದಿಸದೇ ಇದ್ದರೆ ಜೆಡಿಎಸ್ ಪಕ್ಷ ರೈತರೊಂದಿಗೆ ಸೇರಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ” ಎಂದು ಅವರು ಎಚ್ಚರಿಕೆ ನೀಡಿದರು.







