Kalaburagi | ಆರ್ಥಿಕ ನೀತಿ ರೂಪಿಸುವಾಗ ಜನರ ನೈಜ ಸಮಸ್ಯೆಗಳಿಗೆ ಆದ್ಯತೆ ನೀಡಿ: ಪ್ರೊ.ಬಟ್ಟು ಸತ್ಯನಾರಾಯಣ
ಸಿಯುಕೆಯಲ್ಲಿ ಅರ್ಥಶಾಸ್ತ್ರ ಅಧ್ಯಾಪಕರಿಗೆ 3 ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಸಮಾರೋಪ

ಕಲಬುರಗಿ : ಆರ್ಥಿಕ ನೀತಿಗಳನ್ನು ರೂಪಿಸುವಾಗ ಜನರ ನೈಜ ಸಮಸ್ಯೆಗಳು, ಅಗತ್ಯಗಳು ಹಾಗೂ ಸ್ಥಳೀಯ ಪರಿಸ್ಥಿತಿಗಳಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ನೀತಿ ನಿರೂಪಕರು ಮತ್ತು ಸಂಶೋಧಕರು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಹೈದರಾಬಾದ್‌ನ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ–ದಕ್ಷಿಣ ಪ್ರಾದೇಶಿಕ ಕೇಂದ್ರದ (ಐಸಿಎಸ್‌ಎಸ್‌ಆರ್–ಎಸ್‌ಆರ್‌ಸಿ) ಸಹಯೋಗದಲ್ಲಿ ಅರ್ಥಶಾಸ್ತ್ರ ಅಧ್ಯಾಪಕರಿಗಾಗಿ ಆಯೋಜಿಸಿದ್ದ ‘ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆ’ ಕುರಿತ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತ್ವರಿತ ತಾಂತ್ರಿಕ ಪ್ರಗತಿ ಮತ್ತು ಬದಲಾಗುತ್ತಿರುವ ಶೈಕ್ಷಣಿಕ ಪರಿಸರಕ್ಕೆ ಅನುಗುಣವಾಗಿ ಅಧ್ಯಾಪಕರು ತಮ್ಮ ಜ್ಞಾನ ಹಾಗೂ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಶಿಕ್ಷಕರು ಸದಾ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸಲು ಹೊಸ ಜ್ಞಾನ ಸಂಪಾದನೆ ಹಾಗೂ ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ ಎಂದರು.
ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಆರ್ಥಿಕ ನೀತಿಗಳನ್ನು ಅರ್ಥಶಾಸ್ತ್ರಜ್ಞರು ಹಾಗೂ ಸಂಶೋಧಕರು ಸಮಗ್ರವಾಗಿ ಅಧ್ಯಯನ ಮಾಡಿ, ಅವು ಸಮಾಜದ ಮೇಲೆ ಬೀರಿದ ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಬೇಕು. ಆರ್ಥಿಕ ನೀತಿಗಳು ಕೇವಲ ಸೈದ್ಧಾಂತಿಕ ಚಿಂತನೆಗಳಿಗೆ ಸೀಮಿತವಾಗದೆ, ಜನರ ನೈಜ ಅಗತ್ಯಗಳನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡುವ ಮೂಲಕ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕು. ಜ್ಞಾನ ವಿನಿಮಯ ಮತ್ತು ಹೊಸ ವಿಧಾನಗಳ ಅಳವಡಿಕೆಗೆ ಅಧ್ಯಾಪಕರು ಒತ್ತು ನೀಡಬೇಕು ಎಂದು ಕರೆ ನೀಡಿದರು.
ವಾಣಿಜ್ಯ ಅಧ್ಯಯನ ನಿಕಾಯದ ಡೀನ್ ಪ್ರೊ. ಪಾಂಡುರಂಗ ವಿ. ಪತ್ತಿ ಮಾತನಾಡಿ, ಅಧ್ಯಾಪಕರ ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಸಂಶೋಧನಾ ಕೌಶಲ್ಯ ಹೆಚ್ಚಿಸುವುದರ ಜತೆಗೆ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥರು ಹಾಗೂ ಎಫ್‌ಡಿಪಿ ಸಹ ನಿರ್ದೇಶಕ ಡಾ. ಎಸ್. ಲಿಂಗಮೂರ್ತಿ ಮಾತನಾಡಿದರು. ಕಾರ್ಯಕ್ರಮದ ನಿರ್ದೇಶಕ ಡಾ. ಮಲ್ಲೇಶ್ ಉಮ್ಮಲ್ಲ ಅವರು ಮೂರು ದಿನಗಳ ಕಾರ್ಯಕ್ರಮದ ವರದಿ ಮಂಡಿಸಿ ವಂದಿಸಿದರು.
ಹೈದರಾಬಾದ್‌ನ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ–ದಕ್ಷಿಣ ಪ್ರಾದೇಶಿಕ ಕೇಂದ್ರ, ಸೆಂಟರ್ ಫಾರ್ ಎಕನಾಮಿಕ್ ಅಂಡ್ ಸೋಷಿಯಲ್ ಸ್ಟಡೀಸ್ (ಸೆಸ್), ಹೈದರಾಬಾದ್ ವಿಶ್ವವಿದ್ಯಾಲಯ ಹಾಗೂ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‌ನ ಸಂಪನ್ಮೂಲ ವ್ಯಕ್ತಿಗಳು ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆಯ ವಿವಿಧ ಆಯಾಮಗಳ ಕುರಿತು ಉಪನ್ಯಾಸ ಹಾಗೂ ಪ್ರಾಯೋಗಿಕ ಶೈಕ್ಷಣಿಕ ಅವಧಿಗಳನ್ನು ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಕುಲಪತಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಪ್ರತಿನಿಧಿಗಳು ಕಾರ್ಯಕ್ರಮದ ಅನುಭವಗಳನ್ನು ಹಂಚಿಕೊಂಡರು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಡಾ. ಕೃಷ್ಣ ರೆಡ್ಡಿ ಚಿತ್ತೇಡಿ, ಡಾ.ಗಿರೀಶ್ ಆರಾಧ್ಯ, ಡಾ.ಜಾಧವ್ ಚಕ್ರಧರ್ ಹಾಗೂ ಡಾ.ಪೆಡ್ಡಿ ದಯಾಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಡಾ.ಸುಮಾ ಸ್ಕಾರಿಯಾ, ಡಾ.ಬಸವರಾಜ್ ಎಂ., ಡಾ.ಬಾಬು ನಲ್ಲಸಾಮಿ, ಡಾ.ಅನುಶ್ರೀ ಎಸ್.ಪಣಿಕ್ಕಸ್ಸೆರಿ ಸೇರಿದಂತೆ ಪ್ರಾಧ್ಯಾಪಕರು, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






