Kalaburagi | ಸ್ಥಳೀಯ ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡಬೇಕು: ಶರಣು ಬಿ.ಹೊನ್ನಗಜ್ಜಿ
ಬೃಹತ್ ಉದ್ಯೋಗ ಮೇಳ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು. ಉದ್ಯೋಗ ಮೇಳಗಳು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಸಂಪರ್ಕ ಸೇತುವೆಗಳಾಗಿವೆ ಎಂದು ಅನನ್ಯ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಶರಣು ಬಿ. ಹೊನ್ನಗಜ್ಜಿ (ಪೂಜಾರಿ) ಹೇಳಿದರು.
ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಜನಾಭಿಪ್ರಾಯ ಡಿಜಿಟಲ್ ಮಾಧ್ಯಮ ಹಾಗೂ ಕರ್ನಾಟಕ ಟೀಚರ್ಸ್ ಹೆಲ್ಪ್‌ಲೈನ್ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದರೂ ಸ್ಥಳೀಯ ಉದ್ಯೋಗಾವಕಾಶಗಳ ಕೊರತೆಯಿಂದ ಯುವಕರು ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಪದವಿ ಶಿಕ್ಷಣದ ಜತೆಗೆ ಸಂವಹನ ಕಲೆ, ತಾಂತ್ರಿಕ ಜ್ಞಾನ ಹಾಗೂ ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಉದ್ಯೋಗ ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆ, ಕಾರ್ಖಾನೆ ಹಾಗೂ ಖಾಸಗಿ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡದಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಜನಾಭಿಪ್ರಾಯ ಡಿಜಿಟಲ್ ಮಾಧ್ಯಮದ ಸಂಪಾದಕ ರಾಜೇಂದ್ರ ರಾಜವಾಳ ಹೇಳಿದರು.
ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿಯೇ ಉದ್ಯೋಗ ದೊರೆಯುವ ವಾತಾವರಣ ನಿರ್ಮಿಸಬೇಕು. ಇದಕ್ಕಾಗಿ ಸರ್ಕಾರ, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಉದ್ಯೋಗ ಮೇಳ ಆಯೋಜನೆಯು ಜನಾಭಿಪ್ರಾಯ ಮಾಧ್ಯಮದ ಸಾಮಾಜಿಕ ಬದ್ಧತೆಯ ಪ್ರಯತ್ನವಾಗಿದೆ ಎಂದರು.
ಕರ್ನಾಟಕ ಟೀಚರ್ಸ್ ಹೆಲ್ಪ್‌ಲೈನ್ ನಿರ್ದೇಶಕ ಪಾಂಡುರಂಗ ರಾವ್ ಮಾತನಾಡಿ, ಉತ್ತರ ಕರ್ನಾಟಕದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ನೂತನ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಲಾಗಿದೆ ಎಂದರು.
ಶಾಲಾ-ಕಾಲೇಜುಗಳ ಶಿಕ್ಷಕ ಹಾಗೂ ಬೋಧಕೇತರ ಹುದ್ದೆಗಳು, ಆಕ್ಸಿಸ್, ಐಸಿಐಸಿಐ, ಕೋಟಕ್ ಮಹೀಂದ್ರಾ, ಎಚ್‌ಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕುಗಳು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಒದಗಿಸಲಾಗುವುದು. ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ ವಿವಿಧ ಶಾಲಾ-ಕಾಲೇಜುಗಳು, ಬ್ಯಾಂಕಿಂಗ್ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನೂರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿ ಪಡೆದುಕೊಂಡರು.
ಕಾಲೇಜಿನ ಉಪನ್ಯಾಸಕರಾದ ರಾಹುಲ್ ಶೇರಿಕರ್, ಶರಣ್ ಬಡದಾಳ, ಜಗನ್ನಾಥ ಫುಲ್ಲಾ, ಪ್ರವೀಣಕುಮಾರ ನವಲೆ ಹಾಗೂ ಅನಿಲ ನೈಕೋಡಿ ಉಪಸ್ಥಿತರಿದ್ದರು.






