Kalaburagi | ನವೀಕರಿಸಬಹುದಾದ ಇಂಧನ ಬಳಕೆಗೆ ಆದ್ಯತೆ ನೀಡಬೇಕು: ಶ್ರೀಶೈಲ ಬಿರಾದಾರ

ಕಲಬುರಗಿ: ಭವಿಷ್ಯದಲ್ಲಿ ಹೆಚ್ಚಾಗಲಿರುವ ಇಂಧನದ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ಸೌರಶಕ್ತಿ, ಪವನಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ಸಂರಕ್ಷಣೆ, ಇಂಧನ ಉಳಿತಾಯ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ವಿದ್ಯಾರ್ಥಿಗಳು ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಶ್ರೀಶೈಲ ಬಿರಾದಾರ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ‘ಭಾರತದಲ್ಲಿ ಇಂಧನ ಮಿಶ್ರಣ 2047: ಅವಕಾಶಗಳು ಮತ್ತು ಸವಾಲುಗಳು’ ಎಂಬ ಕೇಂದ್ರ ವಿಷಯದಡಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಇಂಧನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೈಗಾರಿಕೆ, ಕೃಷಿ, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಗೆ ಇಂಧನ ಅತ್ಯಗತ್ಯವಾಗಿದೆ. ಭವಿಷ್ಯದ ಭಾರತದ ಇಂಧನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಇಂಧನ ಮೂಲಗಳ ಜೊತೆಗೆ ನವೀಕರಿಸಬಹುದಾದ ಇಂಧನ ಮೂಲಗಳ ಸಮರ್ಪಕ ಬಳಕೆಯೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂಧನ ಸಂರಕ್ಷಣೆಯ ಮಹತ್ವವನ್ನು ಅರಿತು, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನೋಡಲ್ ಅಧಿಕಾರಿ ಗಿರೀಶ ಕಡ್ಲೆವಾಡ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ, ಪರಿಸರ ಜಾಗೃತಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರದ ಅರಿವು ಮೂಡಿಸುವಲ್ಲಿ ಇಂತಹ ವಿಜ್ಞಾನ ವಿಚಾರಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇಂಧನದ ಭವಿಷ್ಯ, ಅದರ ಸಮರ್ಪಕ ಬಳಕೆ, ಪರ್ಯಾಯ ಇಂಧನ ಮೂಲಗಳ ಮಹತ್ವ ಹಾಗೂ 2047ರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ವಿಚಾರಗೋಷ್ಠಿಯ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಎನ್. ಪೊನ್ನರಸನ್, ಚಂದ್ರಕಾಂತ್ ಕ್ಷೀರಸಾಗರ, ಸಿದ್ದಮ್ಮ ಕಲಶೆಟ್ಟಿ ಹಾಗೂ ಮಂಜುಳಾ ಡಾಂಗೆ ಉಪಸ್ಥಿತರಿದ್ದರು.






