Kalaburagi | ಪ್ರೊ.ಚಂದ್ರಕಾಂತ ಯಾತನೂರ ಗುರು–ಶಿಷ್ಯ ಪರಂಪರೆಗೆ ಮಾದರಿ: ಪ್ರೊ.ಟಿ.ಎಂ.ಭಾಸ್ಕರ್

ಕಲಬುರಗಿ: ರೈತ ಕುಟುಂಬದಲ್ಲಿ ಜನಿಸಿದ ಪ್ರೊ. ಚಂದ್ರಕಾಂತ ಯಾತನೂರ ಅವರು ಸಮಚಿತ್ತ ಭಾವನೆಯಿಂದ ಉನ್ನತ ಹುದ್ದೆಗಳ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಗುರು–ಶಿಷ್ಯ ಪರಂಪರೆಯ ಮೌಲ್ಯಗಳಿಗೆ ಮಾದರಿಯಾಗಿದ್ದಾರೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಚಂದ್ರಕಾಂತ ಯಾತನೂರ ಅವರ ವಯೋನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
“ರೈತ ಕುಟುಂಬದಲ್ಲಿ ಜನಿಸಿ ಹಿರಿಯರ ಸಂಸ್ಕಾರ ಹಾಗೂ ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನದಲ್ಲಿ ಬೆಳೆದ ಪ್ರೊ. ಯಾತನೂರ ಅವರು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ,” ಎಂದು ಹೇಳಿದರು.
ರಾಜ್ಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಗುಣಮಟ್ಟದ ಬೋಧನೆ, ಸಂಶೋಧನೆ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ. 35 ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ವಿವಾದಗಳಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹರೀಶ್ ರಾಮಸ್ವಾಮಿ ಅವರು “ಚಂದ್ರಯಾನ” ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ. ಎಂ. ಬಾಯಿನ್, “ಪ್ರೊ. ಯಾತನೂರ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಅದೇ ವಿಭಾಗದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿ ವಿಭಾಗವನ್ನು ಬೆಳೆಸಿದ್ದಾರೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಚಂದ್ರಕಾಂತ ಯಾತನೂರ, ತಮ್ಮ ಶಿಕ್ಷಣ ಮತ್ತು ಜೀವನದಲ್ಲಿ ಕುಟುಂಬದ ಸಹಕಾರ, ಗುರುಗಳ ಮಾರ್ಗದರ್ಶನ ಹಾಗೂ ಸೇವಾ ಅವಧಿಯ ಅನುಭವಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಶಶಿಕಾಂತ್ ಎಸ್. ಉಡಿಕೇರಿ ಮಾತನಾಡಿ, “ಪ್ರೊ. ಯಾತನೂರ ಅವರಿಗೆ ತಂದೆ–ತಾಯಿ ನೀಡಿದ ಸಂಸ್ಕಾರದಿಂದ ಶಿಸ್ತು, ಸಹನೆ ಹಾಗೂ ಕರ್ತವ್ಯನಿಷ್ಠೆ ಜೀವನದಲ್ಲಿ ಮೈಗೂಡಿದೆ,” ಎಂದು ಹೇಳಿದರು.
ಪ್ರೊ. ಚಂದ್ರಕಾoತ ಯಾತನೂರ ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಅನಿಲಕುಮಾರ ಹಾಲು ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ವಿಶ್ರಾಂತ ಎಸ್‌ಪಿ ಜಿ. ಎಂ. ಯಾತನೂರ ಹಾಗೂ ಅಂಜನಾ ಯಾತನೂರ ಮಾತನಾಡಿದರು. ಪೃಥ್ವಿರಾಜ್ ಜಯಂತ್ ಚಂದ್ರಯಾನ ಕುರಿತು ಮಾತನಾಡಿದರು.
ಪ್ರೊ.ಶ್ರೀರಾಮುಲು, ಎಂ. ಎಚ್. ಪ್ರಹ್ಲಾದಪ್ಪ, ಡಾ.ವಿಷ್ಣುವರ್ಧನ್ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ವಿಶ್ರಾಂತ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಯಾತನೂರು ಗ್ರಾಮದ ಹಿರಿಯರು, ಕುಟುಂಭ ವರ್ಗ, ಸ್ನೇಹಿತ ಬಳಗ ಸೇರಿದಂತೆ ನಾಗರೀಕರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಶಿವಲೀಲಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಆಕಾಶವಾಣಿ ಕೇಂದ್ರದ ಉದ್ಘೋಷಕಿ ಶಶಿಕಲಾ ಜಡೆ ಕಾರ್ಯಕ್ರಮ ನಿರ್ವಹಿಸಿದರು. ಡಾ. ವೆಂಕಟೇಶ್ ಪೂಜಾರಿ ವಂದಿಸಿದರು.






