ಕಲಬುರಗಿ | ಕವಿರಾಜಮಾರ್ಗದಲ್ಲಿ ಮನುಷ್ಯ ಪ್ರೀತಿಯ ಸಂದೇಶ : ಪ್ರೊ.ಎಚ್.ಟಿ.ಪೋತೆ

ಕಲಬುರಗಿ : ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಮನುಷ್ಯ ಪ್ರೀತಿಯ ಮೌಲ್ಯವನ್ನು ಅತ್ಯಂತ ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾನೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕವಿರಾಜಮಾರ್ಗ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಒಂದು ನಿಂದನಾ ಮಾರ್ಗ ಮತ್ತು ಮತ್ತೊಂದು ಆರಾಧನಾ ಮಾರ್ಗಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಇವೆರಡೂ ಸಮಾಜಕ್ಕೆ ಅಪಾಯಕಾರಿ. ಆದರೆ ಸಾವಿರಾರು ವರ್ಷಗಳ ಹಿಂದೆ ಶ್ರೀವಿಜಯನು ಕವಿರಾಜಮಾರ್ಗದ ಮೂಲಕ ಪರಧರ್ಮ, ಪರವಿಚಾರಗಳನ್ನು ಸಹಿಸುವ ಹಾಗೂ ಮನುಷ್ಯ ಪ್ರೀತಿಯ ಮೌಲ್ಯವನ್ನು ಪ್ರತಿಪಾದಿಸಿದ್ದಾನೆ. ಆತನ ಆಶಯದಂತೆ ಕವಿಗಳು ನಡೆದಿದ್ದರೆ, ಎಲ್ಲ ಕವಿಗಳೂ ರಾಜರಂತೆಯೇ ಇರುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಮೇಶ ಲಂಡನಕರ್, ಕನ್ನಡದ ಮೊದಲ ಚಿಂತಕ ಶ್ರೀವಿಜಯ ಹಾಕಿಕೊಟ್ಟ ರಾಜಮಾರ್ಗದಲ್ಲೇ ಇಂದಿನ ಕವಿಗಳು ಸಾಗಬೇಕಿದೆ. ಅಂದಾಗ ಮಾತ್ರ ಸಾಹಿತ್ಯ ಇತಿಹಾಸ ನಿರ್ಮಿಸಬಲ್ಲದು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ಧರಾಮ ಹೊನ್ಕಲ್ ಮಾತನಾಡಿ, ಪ್ರತಿದಿನ ಸ್ವಲ್ಪ ಸಮಯವನ್ನು ಪುಸ್ತಕ ಓದಿಗೆ ಮೀಸಲಿಟ್ಟರೆ ಚಿಂತನಾ ಸಾಮರ್ಥ್ಯ ಹಾಗೂ ಆತ್ಮವಿಕಾಸ ಹೆಚ್ಚಾಗುತ್ತದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುನೀಲ ಜಾಬಾದಿ ನಿರೂಪಿಸಿದರು.
ಮೊದಲ ಗೋಷ್ಠಿಯಲ್ಲಿ ಕವಿರಾಜಮಾರ್ಗದ ವೈಶಿಷ್ಟ್ಯ ಕುರಿತು ಡಾ.ಭಾಗ್ಯಜ್ಯೋತಿ ಹಾಗೂ ಕವಿರಾಜಮಾರ್ಗದ ಭಾಷೆ ಕುರಿತು ಡಾ.ನಾಗೇಂದ್ರ ಮಸೂತಿ ಮಾತನಾಡಿದರು. ಅಧ್ಯಕ್ಷತೆಯನ್ನು ಡಾ. ಶ್ರೀಶೈಲ ನಾಗರಾಳ ವಹಿಸಿದ್ದರು.
ಎರಡನೇ ಗೋಷ್ಠಿಯಲ್ಲಿ ಕವಿರಾಜಮಾರ್ಗದ ಜಾನಪದೀಯ ಅಂಶಗಳು ಕುರಿತು ಡಾ. ಚಿ.ಸಿ. ನಿಂಗಣ್ಣ ಮತ್ತು ನಾಡು–ನಾಡವರ–ಕಾವ್ಯ ಕುರಿತು ಡಾ.ಚಿದಾನಂದ ಚಿಕ್ಕಮಠ ಮಾತನಾಡಿದರು. ಅಧ್ಯಕ್ಷತೆಯನ್ನು ಡಾ.ಸೂರ್ಯಕಾಂತ ಸುಜ್ಯಾತ ವಹಿಸಿದ್ದರು.
ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಸಮಾರೋಪ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಡಾ.ರಾಜೇಂದ್ರ ಯರನಾಳೆ ಹಾಗೂ ಸುರೇಶ ಬಡಿಗೇರ ಉಪಸ್ಥಿತರಿದ್ದರು. ಡಾ.ಪ್ರಕಾಶ ಸಂಗಮ ನಿರೂಪಿಸಿದರು.







