ಕಲಬುರಗಿ| ತೊಗರಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ: ತೊಗರಿ ಬೆಳೆಗೆ ಪ್ರತಿ ಟನ್ ಗೆ 12,500 ರೂ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ, ಸಂಯುಕ್ತ ಹೋರಾಟ - ಕರ್ನಾಟಕ ಸಮಿತಿ ವತಿಯಿಂದ ನೆಹರೂ ಗಂಜ್ ಪ್ರದೇಶದಲ್ಲಿರುವ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ಭಾಗದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ಇಲ್ಲಿನ ಉತ್ಕೃಷ್ಟ ಮಟ್ಟದ ತೊಗರಿಯು ವಿಶ್ವದೆಲ್ಲೆಡೆ ಖ್ಯಾತಿ ಪಡೆದಿದ್ದಲ್ಲದೆ "ಜಿಐ" ಟ್ಯಾಗ್ ಕೂಡ ಪಡೆದಿದೆ. ಮೂಲ ಆಧಾರವೇ ತೊಗರಿ ಇದ್ದರೂ ಸರಕಾರ ಸ್ವಾಮಿನಾಥನ್ ವರದಿ ಪ್ರಕಾರ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ (ಕೆಎಂಎಫ್) ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂಪಾಯಿ ಬೆಂಬಲ ಬೆಲೆ ನೀಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಹೊರ ದೇಶದ ತೊಗರಿಗೆ ಶೇ.50ರಷ್ಟು ಆಮದು ಶುಲ್ಕ ಹಾಕಬೇಕು, ತೊಗರಿ ತುರ್ತು ಖರೀದಿ ಕೇಂದ್ರ ಸ್ಥಾಪನೆ, ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಬೇಕು, ವಿಬಿ ಜಿರಾಮ್ ಜಿ ಕಾಯ್ದೆ ಜಾರಿಗೊಳಿಸುತ್ತಿರುವುದನ್ನು ಖಂಡಿಸಿದ ರೈತರು, ಮೊದಲಿನ ನರೇಗಾ ಯೋಜನೆಯನ್ನೇ ಮುಂದುವರೆಸಿಕೊಂಡು ಹೋಗಿ ರೈತರ, ಕೃಷಿ ಕಾರ್ಮಿಕರ ಪರವಾಗಿ ಸರಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಭೀಮಾಶಂಕರ್ ಮಾಡ್ಯಾಳ, ಮಹಾಂತೇಶ್ ಜಮಾದಾರ್, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ವಿಠ್ಠಲ ಮಾಕಾ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ತೊಗರಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಜ.22ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರ ಎತ್ತಿನ ಬಂಡಿ ಹಾಗೂ ಟ್ರಾಕ್ಟರ್ ಗಳ ಮೂಲಕ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ತಿಳಿಸಿದ್ದಾರೆ.







