ಕಲಬುರಗಿ | ಕೇಂದ್ರ ಸರಕಾರದ ಜನ ವಿರೋಧಿ ಬಜೆಟ್ ಖಂಡಿಸಿ ಪ್ರತಿಭಟನೆ

ಕಲಬುರಗಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶದ ಬಹುಸಂಖ್ಯಾತ ಜನರನ್ನು ಕಡೆಗಣಿಸಿ ಬೆರಳಣಿಕೆಯ ಶ್ರೀಮಂತ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ತೋರಿಕೆಗಾಗಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಹೊರತುಪಡಿಸಿದರೆ ಎಲ್ಲಾ ವಲಯದ ಜನರಿಗೆ ನಿರಾಶದಾಯಕ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘ ಆರೋಪಿಸಿದೆ.
ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಕಲಬುರಗಿ ರೈಲ್ವೆ ಸ್ಟೇಶನ್ ತನಕ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ರೈತ ಕಾರ್ಮಿಕರ ಯುವಜನ ಸೇವಾ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುದಾನದ ವರ್ಗಾವಣೆಗಳಲ್ಲಿ ಬಜೆಟ್ನಲ್ಲಿ ನಿಗದಿಪಡಿಸಿದ ಅಂಕಿಅಂಶಗಳಿಗೆ ಹೋಲಿಸಿದರೆ 1.12,000 ಕೋಟಿ ರೂ. ಕಡಿತ ಮಾಡಿದೆ, ಕೇಂದ್ರ ಪ್ರಾಯೋಜಿತ ಸ್ಕಿಮ್ ಗಳಿಗೆ 90,000 ಕೋಟಿ ರೂ.ಗಳಷ್ಟು ಮತ್ತು ಹಣಕಾಸು ಆಯೋಗ ಮತ್ತು ರಾಜ್ಯಗಳಿಗೆ ಇತರ ವರ್ಗಾವಣೆಗಳನ್ನು 22,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಿದೆ. ಹೀಗಾಗಿ ಬಜೆಟ್ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
2024-25 ರಲ್ಲಿನ ಕಡಿತಗಳು ಬಂಡವಾಳ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತವೆ-ಬಜೆಟ್ನಲ್ಲಿ ನಿಗದಿಪಡಿಸಿದ್ದಕ್ಕಿಂತ ಸುಮಾರು 93,000 ಕೋಟಿ ರೂ.ಗಳಷ್ಟು ಕಡಿಮೆ ಆಹಾರ ಸಬ್ಸಿಡಿಗಳು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ ಸೇರಿದಂತೆ ಮತ್ತಿತರ ವಲಯಗಳು ಕಡಿತವನ್ನು ಎದುರಿಸುತ್ತಿವೆ.
ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಕಳೆದ ಬಜೆಟಿನ ಅಂದಾಜು ರೂ. 1.5 ಲಕ್ಷ ಕೋಟಿಗಳಷ್ಟಿತ್ತು ಮತ್ತು ಸರ್ಕಾರವು ಪರಿಷ್ಕೃತ ಅಂದಾಜಿನ ಪ್ರಕಾರ ರೂ.10992 ಕೋಟಿಗಳಷ್ಟು ಕಡಿಮೆ ಖರ್ಚು ಮಾಡಿದೆ. ಎಲ್ಪಿಜಿ ಸಬ್ಸಿಡಿಯನ್ನು ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ರೂ.14.7 ಸಾವಿರ ಕೋಟಿಗಳಿಂದ ಈ ವರ್ಷದ ಬಜೆಟ್ ನಲ್ಲಿ 12 ಸಾವಿರ ಕೋಟಿಗಳಿಗೆ ಇಳಿಸಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಮೋದಿ ಸರಕಾರವು ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಪಡೆದು ಅತ್ಯಂತ ಕಡಿಮೆ ಆರ್ಥಿಕ ನೆರವು ನೀಡಿ, ಕನ್ನಡಿಗರ ತೆರಿಗೆ ಹಣವನ್ನು ಉತ್ತರಪ್ರದೇಶ, ಬಿಹಾರ ಮತ್ತು ತನಗೆ ಬೇಕಾದ ಸ್ನೇಹಿತರ ರಾಜ್ಯಗಳಿಗೆ ನೀಡುವ ಮೂಲಕ ಕನ್ನಡಿಗರಿಗೆ ಮೋಸ ಮಾಡುತ್ತಿದೆ. ಯಾರದೋ ದುಡಿಮೆ ಯಾರಿಗೋ ಫಲ ಎಂಬಂತಾಗಿದೆ. ನಮ್ಮ ದುಡಿಮೆಯ ದುಡ್ಡು ಪರರ ಪಾಲು ಮಾಡುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಿದರು.
ಕಲ್ಯಾಣ ಕರ್ನಾಟಕಕ್ಕೆ ನೀಡಿದ ಘೋಷಣೆಗಳು ಘೋಷಣೆಯಾಗಿಯೇ ಉಳಿದಿವೆ. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಯಾದಗಿರಿ ರೈಲ್ವೆ ಬೋಗಿ ಕಾರ್ಖಾನೆ ವಿಸ್ತರಣೆ, ಕಲಬುರಗಿಯಿಂದ ಬೆಂಗಳೂರು ನವದೆಹಲಿ ನಡುವೆ ವಿಮಾನ ಸೇವೆ, ಕಲಬುರಗಿಯಲ್ಲಿ ನಿಮಾನ್ಸ್ ಆಸ್ಪತ್ರೆ ಸ್ಥಾಪನೆ, ಕಲಬುರಗಿ ಬೈಪಾಸ್ ರಸ್ತೆ, ಯಾದಗಿರಿ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ವಿಸ್ತರಣೆ ಸೇರಿದಂತೆ ಇನ್ನಿತರ ಹಲವು ಘೋಷಣೆಗಳು ಅನುಷ್ಠಾನಕ್ಕೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಚಂದು ಜಾಧವ, ಶಾಂತಪ್ಪ ಪಾಟೀಲ್, ಸೋಮಶೇಖರ ಸಿಂಗೆ, ಸುನೀಲ ಮಾರುತಿ ಮಾನಪಡೆ, ಮೈಲಾರಿ ದೊಡ್ಡನಿ, ಸಂಗಮೇಶ , ವಿಠಲ ಪೂಜಾರಿ, ಜೈಭೀಮ ದೊಡ್ಡನಿ ಸೇರಿದಂತೆ ಮತ್ತಿತರರು ಇದ್ದರು.







